kagawad

ಜುಗುಳದಲ್ಲಿ ರಾಷ್ಟ್ರಸಂತ ಚಿನ್ಮಯ ಸಾಗರ ಮುನಿಗಳ ಚರಣ ಪಾದುಕೆ ಪ್ರತಿಷ್ಠಾಪನೆ: ಭಕ್ತಿ ಸಾಗರದಲ್ಲಿ ತೇಲಿದ ಕಾಗವಾಡ

Share

ಜುಗುಳದಲ್ಲಿ ಚಿನ್ಮಯ ಸಾಗರ ಮುನಿಗಳ ಚರಣ ಪಾದುಕೆ ಪ್ರತಿಷ್ಠಾಪನೆ

ಜಂಗಲವಾಲೆ ಬಾಬಾ ಮಂದಿರ ಲೋಕಾರ್ಪಣೆ ಮಾಡಿದ ಭಕ್ತ ಸಮೂಹ

ಮುನಿಗಳ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮಾಡಿದ ಗಣ್ಯರು

ಭಕ್ತಿ ಪರಾಕಾಷ್ಠೆಯಲ್ಲಿ ಜುಗುಳ ಗ್ರಾಮದ ಜೈನ ಸಮಾಜದ ಶ್ರಾವಕರು

ಜುಗುಳ ಗ್ರಾಮದಲ್ಲಿ ಜೈನ ಸಮಾಜದ ರಾಷ್ಟ್ರಸಂತ ಪೂಜ್ಯ ಚಿನ್ಮಯ ಸಾಗರ ಮುನಿ ಮಹಾರಾಜರ (ಜಂಗಲವಾಲೆ ಬಾಬಾ) ಮಂದಿರ ಹಾಗೂ ಚರಣ ಪಾದುಕೆಯ ಪ್ರತಿಷ್ಠಾಪನಾ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ನೆರವೇರಿತು.

ಕಾಗವಾಡ ತಾಲೂಕಿನ ಈ ಗ್ರಾಮದಲ್ಲಿ ಚಿನ್ಮಯ ಸಾಗರ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಕಾಶ್ ಮೋದಿ ಮತ್ತು ಸುಮಲತಾ ಮೋದಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಈ ಧಾರ್ಮಿಕ ವಿಧಿವಿಧಾನಗಳಿಗೆ ಗ್ರಾಮದ ಸಕಲ ಜೈನ ಸಮಾಜ ಸಾಕ್ಷಿಯಾಯಿತು. ಪೂಜ್ಯ ೧೦೮ ಸಾರಸ್ವತಸಾಗರ ಮುನಿ ಮಹಾರಾಜರು, ೧೦೮ ಜಯಂತಸಾಗರ ಮುನಿ ಮಹಾರಾಜರು ಮತ್ತು ಸಿದ್ಧಸಾಗರ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.

ತಮ್ಮ ಇಡೀ ಜೀವನವನ್ನು ಪ್ರಕೃತಿಯ ಮಡಲಲ್ಲಿ ಕಳೆದ ಕಾರಣಕ್ಕೆ ‘ಜಂಗಲವಾಲೆ ಬಾಬಾ’ ಎಂದೇ ಪ್ರಸಿದ್ಧರಾಗಿದ್ದ ಚಿನ್ಮಯ ಸಾಗರ ಮಹಾರಾಜರು, ವಿಶೇಷವಾಗಿ ಛತ್ತೀಸ್‌ಗಢದ ಆದಿವಾಸಿಗಳು ಮತ್ತು ಹಿಂದುಳಿದ ಜನರ ಏಳಿಗೆಗಾಗಿ ಶ್ರಮಿಸಿದ ಮಹಾನ್ ಚೇತನವಾಗಿದ್ದರು. ಬಾಲ್ಯದಿಂದಲೇ ಅಧ್ಯಾತ್ಮದತ್ತ ಒಲವು ಹೊಂದಿದ್ದ ಇವರು ಲೌಕಿಕ ಸುಖಗಳನ್ನು ತ್ಯಜಿಸಿ ಸಮಾಜದಲ್ಲಿ ನೈತಿಕ ಮೌಲ್ಯಗಳು ಮತ್ತು ಮಾನವೀಯತೆಯನ್ನು ಬಿತ್ತಲು ಶ್ರಮಿಸಿದ್ದರು. ಅವರ ಅಪಾರ ಸೇವೆಯನ್ನು ಗುರುತಿಸಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಸಹ ನೀಡಲಾಗಿತ್ತು.

ಈ ಸಮಾರಂಭದಲ್ಲಿ ಮುನಿಗಳ ಗುರುಗಳಾದ ಎಸ್.ಎಸ್. ಪಾಟೀಲ್, ಜೈನ ಸಮಾಜದ ಅಧ್ಯಕ್ಷ ನ್ಯಾಯವಾದಿ ಭಾಸ್ಕರ್ ಪಾಟೀಲ್, ಡಿ.ಎ. ಪಾಟೀಲ್ ಸೇರಿದಂತೆ ಇಂದೋರ್ ಹಾಗೂ ಛತ್ತೀಸ್‌ಗಢದ ಗಣ್ಯರು ಪಾಲ್ಗೊಂಡು ಮುನಿಗಳ ತತ್ವಗಳ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಡಿ.ಎ. ಪಾಟೀಲ್ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ‘ಚಿನ್ಮಯ ಸಾಗರ ಜೀವನ ಪರಿಚಯ’ ಪುಸ್ತಕವನ್ನು ನಾಂದಣಿ ಮತ್ತು ಕೊಲ್ಹಾಪುರ ಜೈನ ಮಠದ ಭಟ್ಟಾರಕ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಲೋಕಾರ್ಪಣೆಗೊಳಿಸಲಾಯಿತು. ಅಲ್ಲದೆ, ಪುಸ್ತಕದ ಅನುವಾದಕರಿಗೆ ‘ಚಿನ್ಮಯ ಸಾಗರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮುನಿಗಳು ಇದೇ ಗ್ರಾಮದಲ್ಲಿ ಸಮಾಧಿ ಮರಣ ಹೊಂದಿರುವುದರಿಂದ ಜುಗುಳ ಗ್ರಾಮವು ಇಂದು ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಕಾರ್ಯಕ್ರಮದಲ್ಲಿ ಅನ್ನಾಸಾಹೇಬ್ ಪಾಟೀಲ್, ಅರುಣ್ ಗಣೇಶವಾಡಿ ಸೇರಿದಂತೆ ಹಲವಾರು ಶ್ರಾವಕರು ಭಾಗವಹಿಸಿದ್ದರು.

 

Tags:

error: Content is protected !!