Events

ಕಾಗವಾಡ: ವೀರ ಯೋಧನ ಪರಿಹಾರ ಧನದಲ್ಲಿ ನಿರ್ಮಾಣಗೊಂಡ ಮಂದಿರದ ಬೆಳ್ಳಿ ಹಬ್ಬ; ಸೈನಿಕರ ತ್ಯಾಗಕ್ಕೆ ನಮನ

Share

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧನ ಸ್ಮರಣಾರ್ಥ, ಅವರ ತಂದೆ-ತಾಯಿ ನೀಡಿದ ಪರಿಹಾರ ಧನ ಹಾಗೂ ಮಾಜಿ ಸೈನಿಕರ ನೆರವಿನಿಂದ ನಿರ್ಮಾಣಗೊಂಡ ಕಾಗವಾಡದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಈಗ 25 ವರ್ಷಗಳ ಸಂಭ್ರಮ. ಈ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಸಭೆಯಲ್ಲಿ ಪೂಜ್ಯರು ನೀಡಿದ ಮೌಲಿಕ ಸಂದೇಶ ಯುವ ಪೀಳಿಗೆಗೆ ದಾರಿದೀಪವಾಗಿದೆ.

 

ಶ್ರೀ ವಿಠ್ಠಲ ರುಕ್ಮಿಣಿ ಮಂದಿರದ 25ನೇ ವರ್ಷದ ಮಹೋತ್ಸವದ ಅಂಗವಾಗಿ ಕಾಗವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭವು ಅತ್ಯಂತ ಶ್ರದ್ಧಾಭಕ್ತಿಗಳಿಂದ ಜರುಗಿತು. ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ ಸೈನಿಕ ರವೀಂದ್ರ ಕೋಳಿ ಅವರ ಸ್ಮರಣಾರ್ಥವಾಗಿ, ಅವರ ತಾಯಿ ಗಂಗೂಬಾಯಿ ಮತ್ತು ತಂದೆ ಲಕ್ಕಪ್ಪ ಕೋಳಿ ಅವರು ಸರ್ಕಾರದಿಂದ ಬಂದ ಸಂಪೂರ್ಣ ಪರಿಹಾರ ಧನವನ್ನು ಈ ಮಂದಿರದ ನಿರ್ಮಾಣಕ್ಕೆ ದಾನವಾಗಿ ನೀಡುವ ಮೂಲಕ ಅದ್ವಿತೀಯ ದೇಶಪ್ರೇಮ ಮೆರೆದಿದ್ದಾರೆ. ಇವರೊಂದಿಗೆ ಸುಮಾರು 70 ಜನ ಮಾಜಿ ಸೈನಿಕರು ತಮ್ಮ ಒಂದು ತಿಂಗಳ ಪಿಂಚಣಿಯನ್ನು ಮಂದಿರದ ಕಾರ್ಯಕ್ಕೆ ಸಮರ್ಪಿಸಿದ್ದು, ಇಂತಹ ದೇಶಭಕ್ತರ ತ್ಯಾಗದ ಹಣದಿಂದ ನಿರ್ಮಾಣಗೊಂಡ ಈ ಮಂದಿರಕ್ಕೆ ಈಗ 25 ವರ್ಷ ಪೂರ್ಣಗೊಂಡಿದೆ. ಈ ಬೆಳ್ಳಿ ಹಬ್ಬದ ಮಹೋತ್ಸವವನ್ನು ಹಂಚಿನಾಳ ಮಠದ ಪರಮ ಪೂಜ್ಯ ಮಹೇಶಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಲಾಯಿತು.

ಶುಕ್ರವಾರದಂದು ನಡೆದ ಈ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಅಂಕಗಳಿಗೆ ಆದ್ಯತೆ ನೀಡದೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ಜನ್ಮ ನೀಡಿದ ತಂದೆ-ತಾಯಿ, ವಿದ್ಯಾ ಗುರುಗಳು ಮತ್ತು ದೇಶ ಕಾಯುವ ಸೈನಿಕರ ಬಗ್ಗೆ ಗೌರವ ಭಾವನೆ ಬೆಳೆಸಿಕೊಂಡಾಗ ಮಾತ್ರ ಮಗುವಿನ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದ ಅವರು, ಪಾಶ್ಚಾತ್ಯ ಆಹಾರ ಪದ್ಧತಿ ಮತ್ತು ಧಾಬಾ ಸಂಸ್ಕೃತಿಗೆ ಮಾರುಹೋಗಿ ಹೆತ್ತವರನ್ನು ನಿರ್ಲಕ್ಷಿಸುವ ಇಂದಿನ ಯುವ ಪೀಳಿಗೆಗೆ ನೈತಿಕ ಮೌಲ್ಯಗಳ ಅಗತ್ಯವಿದೆ ಎಂದು ಎಚ್ಚರಿಸಿದರು.

ಈ ಮಹೋತ್ಸವದ ಪ್ರಯುಕ್ತ ಪಟ್ಟಣ ಪಂಚಾಯಿತಿ ಮುಂಭಾಗದ ಬೃಹತ್ ಶಾಮಿಯಾನದಲ್ಲಿ ಹೆಸರಾಂತ ಕೀರ್ತನಕಾರರಿಂದ ನಾಮ ಸಂಕೀರ್ತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮಾರಂಭದ ನೇತೃತ್ವವನ್ನು ಮಾಂಜರಿಯ ಹರಿಭಕ್ತ ಪಾರಾಯಣ ಬಾಬಾಸಾಹೇಬ್ ಬಿಸಲೆ ಮಹಾರಾಜ್ ವಹಿಸಿದ್ದರು. ಕಾಗವಾಡದ ಗುರುದೇವ ಆಶ್ರಮದ ಯತೀಶ್ವರಾನಂದ ಸ್ವಾಮೀಜಿಗಳ ಸಮ್ಮುಖದಲ್ಲಿ ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ್ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಭಾಗವಾಗಿ ನ್ಯಾಯವಾದಿ ಸಮೀರ್ ಪಟವರ್ಧನ್ ಅವರಿಂದ ಗ್ರಂಥ ಪೂಜೆ, ಲಕ್ಕಪ್ಪ ಕೋಳಿ ಅವರಿಂದ ತುಳಸಿ ಪೂಜೆ ಹಾಗೂ ಪವನ್ ಪಾಟೀಲ್, ಮಹದೇವ್ ಪಾಟೀಲ್ ಮತ್ತು ಆನಂದ ಸೂರ್ಯವಂಶಿ ಅವರಿಂದ ವಿವಿಧ ಧಾರ್ಮಿಕ ಪೂಜೆಗಳು ನೆರವೇರಿದವು. ಇದೇ ವೇದಿಕೆಯಲ್ಲಿ 70 ಜನ ನಿವೃತ್ತ ಸೈನಿಕರು, ವೀರಮಾತೆ ಹಾಗೂ ವೀರ ಪತ್ನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಯಶಸ್ಸಿಗಾಗಿ ರಮೇಶ್ ಲ್ಯಾಂಡಗೆ, ರಮೇಶ್ ರಜಪೂತ, ಅಣ್ಣಾಸಾಹೇಬ್ ಜಾದವ್, ಅನಿಲ್ ಗಾಯಕ್ವಾಡ್, ಶಿರಸು ಪಾಟೀಲ್, ಪ್ರವೀಣ ಶಿಂದೆ, ವಿಲಾಸ್ ಪಾಟೀಲ್, ರಾಯಗೊಂಡ ಪಾಟೀಲ್, ಕಾಕಾ ಪಾಟೀಲ್ ಹಾಗೂ ರಾಮಚಂದ್ರ ಪವಾರ್ ಅವರು ಶ್ರಮಿಸಿದರು. ಸಮಾರಂಭದ ನಿರೂಪಣೆಯನ್ನು ಪ್ರಾಧ್ಯಾಪಕರಾದ ಭರತ್ ಖೂತ, ಜೆ.ಕೆ. ಪಾಟೀಲ್, ಅರುಣ ಜೋಶಿ ಮತ್ತು ಸಂತೋಷ್ ಪೂಜಾರಿ ಅಚ್ಚುಕಟ್ಟಾಗಿ ನಿರ್ವಹಿಸಿದರು. (ವರದಿ: ಸುಕುಮಾರ್ ಬನ್ನುರೆ, ಇನೆ ನ್ಯೂಸ್ ಕಾಗವಾಡ)

Tags:

error: Content is protected !!