ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳಗಾವಿ ವಕೀಲರ ಸಂಘದ ಪ್ರಮುಖ ಅಭ್ಯರ್ಥಿ ಐ.ಎಮ್. ಪಾಟೀಲ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಬೆಂಗಳೂರನ್ನು ಹೊರತುಪಡಿಸಿದರೆ ರಾಜ್ಯದಲ್ಲೇ ಎರಡನೇ ಅತಿ ದೊಡ್ಡ ವಕೀಲರ ಸಂಘ ಹೊಂದಿರುವ ಬೆಳಗಾವಿ ಜಿಲ್ಲೆಗೆ ಈ ಗೆಲುವು ಹೆಮ್ಮೆ ತಂದಿದ್ದು, ಜಿಲ್ಲೆಯ ವಕೀಲರ ಸಮೂಹದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.


ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಹಿರಿಯ ವಕೀಲರಾದ ಐ.ಎಮ್. ಪಾಟೀಲ್ ಅವರು 13ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ. ರಾಜ್ಯದ ಎರಡನೇ ರಾಜಧಾನಿ ಎಂದೇ ಗುರುತಿಸಲ್ಪಡುವ ಬೆಳಗಾವಿ ಜಿಲ್ಲೆಯ ವಕೀಲರ ಸಂಘವು ಅತ್ಯಂತ ಪ್ರಭಾವಶಾಲಿಯಾಗಿದ್ದು, ಈ ಬಾರಿ ಕೌನ್ಸಿಲ್‌ನ ಒಟ್ಟು 18 ಸಾಮಾನ್ಯ ಸ್ಥಾನಗಳ ಪೈಕಿ ಐ.ಎಮ್. ಪಾಟೀಲ್ ಅವರು ಬಾರ್ ಕೌನ್ಸಿಲ್‌ಗೆ ಆಯ್ಕೆಯಾಗಿದ್ದಾರೆ. ಬೆಳಗಾವಿ ಬಾರ್ ಅಸೋಸಿಯೇಷನ್ ಪರವಾಗಿ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಈ ಫಲಿತಾಂಶದ ಕುರಿತು ಮಾತನಾಡಿದ ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾದ ಎಸ್. ಎಸ್. ಕಿವಡಸಣ್ಣವರ ಅವರು, “ಬೆಳಗಾವಿ ಜಿಲ್ಲೆಯು ಕರ್ನಾಟಕದ ಅತ್ಯಂತ ದೊಡ್ಡ ಬಾರ್‌ಗಳಲ್ಲಿ ಒಂದಾಗಿದೆ. ನಮ್ಮ ಜಿಲ್ಲೆಯಿಂದ ಐ.ಎಮ್. ಪಾಟೀಲ್ ಅವರು ಆರಿಸಿ ಬಂದಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯ ಎಲ್ಲಾ 14 ತಾಲೂಕು ಬಾರ್ ಅಸೋಸಿಯೇಷನ್‌ಗಳ ಪರವಾಗಿ ಅವರಿಗೆ ಧನ್ಯವಾದಗಳು. ಇನ್ನುಳಿದ ಅಭ್ಯರ್ಥಿಗಳು ಸಹ ರೇಸ್‌ನಲ್ಲಿದ್ದು, ಮತ್ತಷ್ಟು ಮಂದಿ ಆಯ್ಕೆಯಾಗುವ ನಿರೀಕ್ಷೆಯಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನೂತನ ಸದಸ್ಯರ ಸಹೋದರರಾದ ಲಿಂಗನಗೌಡ ಪಾಟೀಲ್ ಅವರು ಪ್ರತಿಕ್ರಿಯಿಸಿ, “ನನ್ನ ಹಿರಿಯಣ್ಣನಾದ ಈಶ್ವರ ಮಲ್ಲಪ್ಪ ಪಾಟೀಲ್ (ಐ.ಎಮ್. ಪಾಟೀಲ್) ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ 13ನೇ ಸ್ಥಾನ ಗಳಿಸಿ ಆಯ್ಕೆಯಾಗಿರುವುದು ಇಡೀ ಜಿಲ್ಲೆಗೆ ಸಂತಸ ತಂದಿದೆ. ಬೆಳಗಾವಿ ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ವಕೀಲರ ಪರವಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ತಿಳಿಸಿದರು.
ಒಟ್ಟಾರೆ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ಬೆಳಗಾವಿಯ ವಕೀಲರ ಧ್ವನಿ ಗಟ್ಟಿಯಾಗಲಿದ್ದು, ಚುನಾವಣೆ ಫಲಿತಾಂಶ ತಿಳಿಯಲು ಆಗಮಿಸಿದ್ದ ಮಾಧ್ಯಮ ಮಿತ್ರರಿಗೂ ವಕೀಲರ ಸಂಘದ ವತಿಯಿಂದ ಧನ್ಯವಾದಗಳನ್ನು ಅರ್ಪಿಸಲಾಯಿತು.
