ಕಾಗವಾಡ ತಾಲೂಕಿನ ಜುಗುಳ ಗ್ರಾಮದ ಹೆಮ್ಮೆಯ ಪುತ್ರಿ ಜ್ಯೋಷ್ನಾ ಬಾಲಚಂದ್ರ ಪಾಟೀಲ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಗ್ರಾಮದ ಹಿರಿಯರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.

ಜುಗುಳ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್. ಎಸ್. ಪಾಟೀಲ್ ಅವರ ಮೊಮ್ಮಗಳಾದ ಜ್ಯೋಷ್ನಾ ಬಾಲಚಂದ್ರ ಪಾಟೀಲ್, ಪ್ರಾಥಮಿಕ ಶಿಕ್ಷಣವನ್ನು ಜುಗುಳದ ಕರ್ನಾಟಕ ಶಿಕ್ಷಣ ಸಮಿತಿಯ ಶಾಲೆಯಲ್ಲಿ ಪೂರೈಸಿದ್ದಳು. ನಂತರ 6ನೇ ತರಗತಿಯಿಂದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಕ್ಸ್‌ಫರ್ಡ್ ಪಿಯು ಕಾಲೇಜಿನ ನಾನಾರಭಟ್ಟ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಕೆ ಒಟ್ಟು 624 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನದ ಗೌರವ ತಂದಿದ್ದಾಳೆ.

ಆಕೆಯ ಅಂಕಪಟ್ಟಿಯಲ್ಲಿ ಕನ್ನಡ, ಹಿಂದಿ, ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳು ಲಭಿಸಿದ್ದವು. ಆದರೆ ಇಂಗ್ಲಿಷ್ ವಿಷಯದಲ್ಲಿ ಮೊದಲು 99 ಅಂಕಗಳು ಬಂದಿದ್ದವು. ಅಂಕಗಳ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಿದಾಗ ಇಂಗ್ಲಿಷ್‌ನಲ್ಲಿ ಒಂದು ಅಂಕ ಹೆಚ್ಚಳವಾಗಿ 100ಕ್ಕೆ 100 ಅಂಕಗಳು ದೊರೆತವು. ಇದರಿಂದಾಗಿ ವಿದ್ಯಾರ್ಥಿನಿಯ ಒಟ್ಟು ಅಂಕ 624ಕ್ಕೆ ಏರಿಕೆಯಾಗಿ, ರಾಜ್ಯಮಟ್ಟದ ದ್ವಿತೀಯ ಸ್ಥಾನ ಲಭಿಸಿತು.
ವಿದ್ಯಾರ್ಥಿನಿಗೆ ಶಿಕ್ಷಣ ಸಂಸ್ಥೆಯ ವತಿಯಿಂದ ಹಾಗೂ ರಾಜ್ಯ ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದರಿಂದ ಜುಗುಳ ಗ್ರಾಮಕ್ಕೆ ಆಗಮಿಸುವುದು ಒಂದು ದಿನ ವಿಳಂಬವಾಗಿತ್ತು. ಆದರೂ ಗ್ರಾಮಕ್ಕೆ ಆಗಮಿಸಿದ ಜ್ಯೋಷ್ನಾ ಪಾಟೀಲ್ ಅವರನ್ನು ಕುಟುಂಬದವರು ಹಾಗೂ ನಿವೃತ್ತ ಶಿಕ್ಷಕರು ಸಂಭ್ರಮದಿಂದ ಸ್ವಾಗತಿಸಿ, ಅವಳ ಅಪ್ರತಿಮ ಸಾಧನೆಯನ್ನು ಕೊಂಡಾಡಿದರು.
ತನ್ನ ಸಾಧನೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಜ್ಯೋಷ್ನಾ ಪಾಟೀಲ್, “ನನ್ನ ಈ ಯಶಸ್ಸಿಗೆ ಆಕ್ಸ್‌ಫರ್ಡ್ ಮಹಾವಿದ್ಯಾಲಯದ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ವಿಶೇಷ ಮಾರ್ಗದರ್ಶನವೇ ಕಾರಣ. ನಾನು ಪ್ರತಿದಿನ ಸಮಯ ವ್ಯರ್ಥ ಮಾಡದೆ ಆರು ಗಂಟೆಗಳ ಕಾಲ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದೆ. ನನ್ನ ಅಜ್ಜ, ಅಜ್ಜಿ ಹಾಗೂ ತಂದೆ-ತಾಯಿಯ ಆಶೀರ್ವಾದ ಸದಾ ನನ್ನ ಮೇಲಿದೆ. ಮರುಎಣಿಕೆಯಲ್ಲಿ ಇಂಗ್ಲಿಷ್‌ನಲ್ಲಿ ಒಂದು ಅಂಕ ಹೆಚ್ಚಾದ್ದರಿಂದ ರಾಜ್ಯಕ್ಕೆ ದ್ವಿತೀಯ ಸ್ಥಾನ ಸಿಕ್ಕಿರುವುದು ನನ್ನ ಸೌಭಾಗ್ಯ. ಮುಂದೆ ಐಐಟಿ ಪ್ರವೇಶ ಪಡೆಯುವ ಗುರಿ ಹೊಂದಿದ್ದೇನೆ,” ಎಂದು ಹರ್ಷ ವ್ಯಕ್ತಪಡಿಸಿದಳು.
ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾರ್ಥಿನಿಯ ಅಜ್ಜ ಶಿವಗೌಡ ಶಂಕರ್ ಪಾಟೀಲ್ ಮತ್ತು ಗ್ರಾಮದ ಹಿರಿಯ ಮುಖ್ಯಗುರುಗಳಾದ ಆರ್. ವಿ. ಪಾಟೀಲ್ ಮಾತನಾಡಿ, “ಜ್ಯೋಷ್ನಾ ಪಾಟೀಲ್ ಮಾಡಿರುವ ಸಾಧನೆ ಅತ್ಯಂತ ಶ್ಲಾಘನೀಯ. ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಜುಗುಳ ಗ್ರಾಮದಲ್ಲಿ ಈವರೆಗೆ ಇಷ್ಟು ಅಂಕ ಗಳಿಸಿದ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಅವಳ ಸಾಧನೆ ನಮ್ಮ ಮನೆತನಕ್ಕೆ ಹಾಗೂ ಈ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ,” ಎಂದು ಹಾರೈಸಿದರು.
ಕುಟುಂಬದ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಅಜ್ಜ ಶಿವಗೌಡ, ಅಜ್ಜಿ ಮಂಗಲಾ, ತಂದೆ ಬಾಲಚಂದ್ರ ಪಾಟೀಲ್, ತಾಯಿ ಸನ್ಮತಿ ಪಾಟೀಲ್ ಹಾಗೂ ನಿವೃತ್ತ ಶಿಕ್ಷಕರಾದ ಬಿ. ಜೆ. ಕುರೊಂದುವಾಡೆ, ಎಂ. ಎಸ್. ಸಾವಳಜಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
