ಭಕ್ತರ ಸಂಕಷ್ಟಗಳನ್ನು ದೂರಮಾಡಿ ಮನದ ಇಚ್ಛೆಯನ್ನು ಈಡೇರಿಸುವ ದೈವವಾಗಿ ಪ್ರಸಿದ್ಧಿಯಾಗಿರುವ ಉಗಾರ ಪಟ್ಟಣದ ಶ್ರೀ ಲಕ್ಷ್ಮೀದೇವಿ – ಲಗಮವ್ವ ದೇವಿಯ ಜಾತ್ರೆಯು ಭಕ್ತಿಮಯ ವಾತಾವರಣದಲ್ಲಿ ಭವ್ಯವಾಗಿ ಜರುಗುತ್ತಿದೆ. ಭಕ್ತರು ತಮ್ಮ ಜೀವನದ ಒಳಿತಿಗಾಗಿ ಹರಕೆ ಹೊತ್ತು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.


ಶನಿವಾರ ಸಂಜೆ ಉಗಾರ ಪಟ್ಟಣದಿಂದ ಕೃಷ್ಣಾ ನದಿಗೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ‘ಉಗಾರ ಸ್ವಚ್ಛತಾ ಅಭಿಯಾನ’ ಸಂಘಟನೆಯ ಸದಸ್ಯರು ಸ್ವಚ್ಛಗೊಳಿಸಿದರು. ಮಹಿಳೆಯರು ಮತ್ತು ಯುವತಿಯರು ರಂಗೋಲಿಗಳನ್ನು ಬಿಡಿಸಿ ಅಲಂಕರಿಸುವ ಮೂಲಕ ಭಕ್ತರನ್ನು ಸ್ವಾಗತಿಸಿದರು. ಮಧ್ಯರಾತ್ರಿಯಿಂದಲೇ ಸಾವಿರಾರು ಮಹಿಳಾ ಹಾಗೂ ಪುರುಷ ಭಕ್ತರು ದೇವಿಗೆ ಹರಕೆ ತೀರಿಸಲು ದೀರ್ಘ ನಮಸ್ಕಾರ ಹಾಕುತ್ತಿದ್ದು, ಅವರಿಗೆ ಅಗತ್ಯ ಸಹಕಾರ ನೀಡಲು ಸಂಘಟನೆಯು ಸಜ್ಜಾಗಿದೆ.
ಉಗಾರ ಸ್ವಚ್ಛತಾ ಅಭಿಯಾನ ಸಂಘಟನೆಯ ಸಂಜಯ ಶಿಂದೆ, ಚಿಂತಾಮಣಿ ಜೋಶಿ, ಬಾಳು ಕಾಂಬಳೆ, ನೇತಾಜಿ ಸಾವಂತ್, ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷ ರಾಘವೇಂದ್ರ ಪಾಟೀಲ್, ಸುಪ್ರಿಯಾ ಶಿಂಧೆ, ಸಂಧ್ಯಾ ದಾತೆ, ಅಶ್ವಿನಿ ಪಾಟೀಲ್, ದುಶಮಾನೆ, ಧನಶ್ರೀ ಶಿಂಧೆ, ನೇತಾ ಕೋಳಿ ಸೇರಿದಂತೆ ಅನೇಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದರು.
ರವಿವಾರ ಜಾತ್ರೆಯ ಪ್ರಮುಖ ದಿನವಾಗಿದ್ದು, ದೇವಿಗೆ ನೈವೇದ್ಯ, ಪೂಜೆ ಹಾಗೂ ಅರ್ಚನೆ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಸುಡುವ ಬಿಸಿಲಿನಲ್ಲಿ ಆಗಮಿಸಿದ ಭಕ್ತರಿಗೆ ಸ್ಥಳೀಯ ಯುವಕರ ಸಂಘಟನೆ ವತಿಯಿಂದ ಮಜ್ಜಿಗೆ, ತಂಪು ಪಾನೀಯ ಮತ್ತು ಕೋಕಂ ವಿತರಿಸುವ ಮೂಲಕ ಮಾನವೀಯತೆ ಮೆರೆದರು.
ಉಗಾರ ಸ್ವಚ್ಛತಾ ಅಭಿಯಾನ ಸಂಘಟನೆಯ ಪ್ರಮುಖರಾದ ಸಂಜಯ್ ಶಿಂಧೆ ಮಾತನಾಡಿ, ಜಾತ್ರೆಗೆ ಆಗಮಿಸುವ ಭಕ್ತರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ. ಕೆಲ ಭಕ್ತರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಸಿಹಿ ಪದಾರ್ಥಗಳನ್ನು ನದಿಗೆ ಎಸೆಯುತ್ತಿರುವುದನ್ನು ಗಮನಿಸಿ, ನದಿ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಸಂಘಟನೆಯ ಸದಸ್ಯರು ಅದನ್ನು ತಡೆಯುವ ಕಾರ್ಯ ಕೈಗೊಂಡಿದ್ದಾರೆ. ನದಿ ತೀರದಲ್ಲಿ ತ್ಯಾಜ್ಯ ಸಂಗ್ರಹವಾದಲ್ಲಿ ಸದಸ್ಯರು ಸ್ವತಃ ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ ಎಂದರು.
ಜಾತ್ರೆಯ ನಿಮಿತ್ತ ವಿವಿಧ ಗ್ರಾಮಗಳಿಂದ ಹಸು ಮತ್ತು ಎತ್ತುಗಳ ಸಂತೆಯನ್ನು ಹಮ್ಮಿಕೊಳ್ಳಲಾಗಿದ್ದು, ಉತ್ತಮ ತಳಿಯ ಜಾನುವಾರುಗಳು ಆಗಮಿಸಿವೆ. ಅನೇಕ ರೈತರು ಮತ್ತು ವ್ಯಾಪಾರಿಗಳು ಖರೀದಿ–ಮಾರಾಟದಲ್ಲಿ ತೊಡಗಿಕೊಂಡಿದ್ದು, ಜಾತ್ರಾ ಸಮಿತಿಯವರು ದನಕರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
