Kagawad

ಕಾಗವಾಡ: ಉಗಾರ ಖುರ್ದ್‌ನಲ್ಲಿ ಶಕ್ತಿ ದೇವತೆಗಳ ಜಾತ್ರೋತ್ಸವ; ಕೃಷ್ಣಾ ತೀರದಲ್ಲಿ ಭಕ್ತರ ಸಾಗರ!

Share

ಕೃಷ್ಣಾ ನದಿಯ ಪವಿತ್ರ ತೀರದಲ್ಲಿರುವ ಉಗಾರ ಖುರ್ದ್ ಪಟ್ಟಣದ ಆರಾಧ್ಯ ದೈವ ಶ್ರೀ ಲಕ್ಷ್ಮಿ ದೇವಿ ಮತ್ತು ಲಗಮವ್ವ ದೇವಿಯ ಜಾತ್ರಾ ಮಹೋತ್ಸವವು ಶನಿವಾರ ಅತ್ಯಂತ ಸಡಗರ ಮತ್ತು ಭಕ್ತಿಪೂರ್ವಕವಾಗಿ ಆರಂಭಗೊಂಡಿತು. ಭಕ್ತರ ಸಂಕಷ್ಟಗಳನ್ನು ನೀಗಿಸುವ ತಾಯಿ ಎಂದೇ ಖ್ಯಾತಿಯಾಗಿರುವ ಈ ದೇವಿಯ ದರ್ಶನಕ್ಕಾಗಿ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದರು.

ಶನಿವಾರ ಮುಂಜಾನೆ ಮಂದಿರದ ಅರ್ಚಕ ರಾಜು ಗುರವ ಅವರು ದೇವಿಗೆ ವಿಧಿವತ್ತಾದ ಪೂಜೆ ಮತ್ತು ಅಭಿಷೇಕಗಳನ್ನು ನೆರವೇರಿಸಿದರು. ನಂತರ ದೇವಿಯ ಭವ್ಯ ಪಲ್ಲಕ್ಕಿ ಮೆರವಣಿಗೆಯು ಮಂದಿರದಿಂದ ಪ್ರಮುಖ ಬೀದಿಗಳ ಮೂಲಕ ಕೃಷ್ಣಾ ನದಿಯತ್ತ ಸಾಗಿತು. ಈ ಸಂದರ್ಭದಲ್ಲಿ ಭಕ್ತರು “ಶ್ರೀ ಲಕ್ಷ್ಮಿ ದೇವಿಗೆ ಚಾಂಗ ಭಲೋ” ಎಂಬ ಜಯಘೋಷಗಳೊಂದಿಗೆ ನಾಮಸ್ಮರಣೆ ಮಾಡಿದರು. ನದಿತೀರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿಯನ್ನು ಮರಳಿ ಮಂದಿರಕ್ಕೆ ತಂದು ಮಹಾಪೂಜೆ ನೆರವೇರಿಸುವ ಮೂಲಕ ಜಾತ್ರೆಯ ಧಾರ್ಮಿಕ ವಿಧಿವಿಧಾನಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

ಜಾತ್ರೆಯ ಅಂಗವಾಗಿ ಕಾಗವಾಡ ಪೊಲೀಸ್ ಠಾಣೆಯ ಎ.ಎಸ್.ಐ ಬೀರಪ್ಪ ಪೂಜಾರಿ ಅವರು ನದಿತೀರದಲ್ಲಿ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ದೀಪಕ್ ಪಾಟೀಲ್, ಬಸು ಸಾಂಗಾವೆ, ಬಾಳಾಸಾಹೇಬ್ ವೀಸಾಪುರೆ, ರೋಹನ್ ನಾಯಿಕ, ಪುರಸಭೆ ಉಪಾಧ್ಯಕ್ಷ ಸತೀಶ್ ಜಗತಾಪ್ ಸೇರಿದಂತೆ ಊರಿನ ಪ್ರಮುಖರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು. ಶಾಸಕ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ಹಾಗೂ ಮಂದಿರದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ದಾದೂಬಾ ಥೂರುಶೇ ಅವರ ನೇತೃತ್ವದಲ್ಲಿ ಇಡೀ ಉತ್ಸವವನ್ನು ಅಚ್ಚುಕಟ್ಟಾಗಿ ಸಂಘಟಿಸಲಾಗಿತ್ತು.

ರವಿವಾರ ಜಾತ್ರೆಯ ಪ್ರಮುಖ ದಿನವಾಗಿದ್ದು, ಅಂದು ದೇವಿಗೆ ಪಂಚಾಮೃತ ಅಭಿಷೇಕ ಮತ್ತು ನೈವೇದ್ಯ ಸಮರ್ಪಣೆ ನಡೆಯಿತು. ಹರಕೆ ಹೊತ್ತ ಭಕ್ತರು ದೀರ್ಘ ನಮಸ್ಕಾರ ಹಾಕುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಪಟ್ಟಣದ ಪ್ರತಿಯೊಂದು ಮನೆಯಲ್ಲೂ ಸಿಹಿ ಅಡುಗೆ ಮಾಡಿ ದೇವಿಗೆ ನೈವೇದ್ಯ ಅರ್ಪಿಸುವ ಮೂಲಕ ಸಂಪ್ರದಾಯವನ್ನು ಆಚರಿಸಲಾಯಿತು. ಇಡೀ ಉಗಾರ ಖುರ್ದ್ ಪಟ್ಟಣವು ದೇವಿಯ ನಾಮಸ್ಮರಣೆಯೊಂದಿಗೆ ಭಕ್ತಿಮಯ ವಾತಾವರಣದಲ್ಲಿ ಮಿಂದೆದ್ದಿತು.

Tags:

error: Content is protected !!