BELAGAVI

ಬೆಳಗಾವಿ: ಕೆ.ಎಲ್.ಇ ಸಂಸ್ಥೆಯಲ್ಲಿ 28ನೇ ಐಪಿಎಸ್ ರಾಷ್ಟ್ರೀಯ ಸಮಾವೇಶಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವಿದ್ಯುಕ್ತ ಚಾಲನೆ

Share

ಬೆಳಗಾವಿಯ ಕೆ.ಎಲ್.ಇ ವಿ.ಕೆ. ದಂತ ವಿಜ್ಞಾನ ಸಂಸ್ಥೆಯಲ್ಲಿಂದು ರಾಷ್ಟ್ರ ಮಟ್ಟದ ದಂತ ವೈದ್ಯಕೀಯ ಸಮಾವೇಶಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ‘ಪರಂಪರೆ ಮತ್ತು ತಂತ್ರಜ್ಞಾನದ ಸಮ್ಮಿಲನ’ ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿರುವ ಈ 28ನೇ ಐಪಿಎಸ್ ರಾಷ್ಟ್ರೀಯ ಪಿಜಿ ಸಮಾವೇಶವು, ದೇಶದ ಪ್ರಮುಖ ದಂತ ವೈದ್ಯಕೀಯ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ವೈಜ್ಞಾನಿಕ ಚರ್ಚೆಗೆ ವೇದಿಕೆಯಾಗಿದೆ.

ಬೆಳಗಾವಿಯ ಜೆ.ಎನ್.ಎಂ.ಸಿ ಕ್ಯಾಂಪಸ್‌ನ ಕೆ.ಎಲ್.ಇ ಶತಮಾನೋತ್ಸವ ಸಮಾವೇಶ ಕೇಂದ್ರದಲ್ಲಿಂದು 28ನೇ ಐಪಿಎಸ್ ರಾಷ್ಟ್ರೀಯ ಪಿಜಿ ಸಮಾವೇಶವನ್ನು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಂತ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ತಾಂತ್ರಿಕ ಬದಲಾವಣೆಗಳಿಗೆ ವೈದ್ಯರು ಒಗ್ಗಿಕೊಳ್ಳಬೇಕು ಮತ್ತು ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಮೂರು ದಿನಗಳ ಕಾಲ ನಡೆಯಲಿರುವ ಈ ಬೃಹತ್ ಸಮಾವೇಶದಲ್ಲಿ ಭಾರತದಾದ್ಯಂತ 2300ಕ್ಕೂ ಹೆಚ್ಚು ದಂತ ವೈದ್ಯಕೀಯ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಐಪಿಎಸ್ ಅಧ್ಯಕ್ಷ ಡಾ. ವಿ. ಆನಂದ್ ಕುಮಾರ್, ಕಾರ್ಯದರ್ಶಿ ಡಾ. ಜಂಗಾಲ ಹರಿ ಸೇರಿದಂತೆ ದಂತ ವೈದ್ಯಕೀಯ ಕ್ಷೇತ್ರದ ದಿಗ್ಗಜರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾವೇಶದ ಅಂಗವಾಗಿ ಸ್ಮರಣ ಸಂಚಿಕೆ ಹಾಗೂ ‘ಐಪಿಎಸ್ ಟೈಮ್ಸ್’ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಕೆ.ಎ.ಎಚ್.ಇ.ಆರ್ ಕುಲಪತಿ ಡಾ. ಪ್ರಭಾಕರ್ ಕೋರೆ ಅವರು ಗೌರವ ಅತಿಥಿಗಳಾಗಿ ಪಾಲ್ಗೊಂಡು, ಕೆ.ಎಲ್.ಇ ಸಂಸ್ಥೆಯ ಶೈಕ್ಷಣಿಕ ಸಾಧನೆ ಹಾಗೂ ದಂತ ವೈದ್ಯಕೀಯ ಕ್ಷೇತ್ರದ ಸೇವೆಗಳ ಕುರಿತು ಮಾಹಿತಿ ನೀಡಿದರು.

ಸಮಾವೇಶದ ಆಯೋಜಕ ಅಧ್ಯಕ್ಷ ಡಾ. ಆನಂದಕುಮಾರ್ ಪಾಟೀಲ ಸ್ವಾಗತಿಸಿದರು ಮತ್ತು ಸಂಘಟನಾ ಕಾರ್ಯದರ್ಶಿ ಡಾ. ರಮೇಶ್ ನಾಯಕರ್ ವಂದಿಸಿದರು. ಈ ಸಮಾವೇಶವು ದಂತ ವೈದ್ಯಕೀಯ ಕ್ಷೇತ್ರದಲ್ಲಿನ ಇತ್ತೀಚಿನ ಆವಿಷ್ಕಾರಗಳ ಕುರಿತು ಗಂಭೀರ ಚಿಂತನೆಗೆ ಸಾಕ್ಷಿಯಾಯಿತು.

Tags:

error: Content is protected !!