BELAGAVI

ಜೈನ ಸಮಾಜದ ಕೊಡುಗೆ ಅನನ್ಯ; ಕಮಲ ಬಸದಿ ಮಹೋತ್ಸವದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬಣ್ಣನೆ

Share

ವಿಶ್ವಪ್ರಸಿದ್ಧ ಕಮಲ ಬಸದಿಯಲ್ಲಿ ನಡೆಯುತ್ತಿರುವ ಧರ್ಮಚಕ್ರ ಆರಾಧನಾ ಮಹೋತ್ಸವದಲ್ಲಿ ಭಾಗಿಯಾದ ಸಚಿವ ಸತೀಶ್ ಜಾರಕಿಹೊಳಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಜೈನ ಸಮಾಜ ನೀಡಿದ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದ ವಿವಿಧ ಜೈನ ಮಠಗಳ ಅಭಿವೃದ್ಧಿಗೆ ಸಿದ್ಧರಾಮಯ್ಯ ಸರ್ಕಾರವು ಕೋಟ್ಯಾಂತರ ರೂಪಾಯಿ ಅನುದಾನದ ನೀಡಿರುವುದಾಗಿ ಅವರು ತಿಳಿಸಿದರು.

ಬೆಳಗಾವಿಯ ಐತಿಹಾಸಿಕ ಕೋಟೆ ಆವರಣದಲ್ಲಿರುವ ಕಮಲ ಬಸದಿಯಲ್ಲಿ ಏಪ್ರಿಲ್ 24 ರಿಂದ 28 ರವರೆಗೆ ಐದು ದಿನಗಳ ಕಾಲ ಧರ್ಮಚಕ್ರ ಆರಾಧನಾ ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುತ್ತಿದೆ. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಉತ್ತರ ಶಾಸಕ ಆಸೀಫ್ ಸೇಠ್, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಹಾಗೂ ಮರಾಠಾ ಲೈಟ್ ಇನ್ಫೆಂಟ್ರಿ ಕಮಾಂಡಿಂಗ್ ಆಫೀಸರ್ ಬ್ರಿಗೇಡಿಯರ್ ಜಾಯದೀಪ ಮುಖರ್ಜಿ, ಸಮಿತಿಯ ಕಾರ್ಯದರ್ಶಿ ಹೀರಾಚಂದ ಕಲಮನಿ, ವಾಕರಸಾ ಉಪಾಧ್ಯಕ್ಷರಾದ ಸುನೀಲ್ ಹಣುಮಣ್ಣವರ, ಅವರು ಬಸದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

ಈ ಐತಿಹಾಸಿಕ ಮಹೋತ್ಸವದಲ್ಲಿ ಶಾಸಕರಾದ ರಾಜು ಸೇಠ್, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಚೆನ್ನರಾಜ ಹಟ್ಟಿಹೊಳಿ ಹಾಗೂ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮೊದಲಾದ ಮುಖಂಡರು ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದರು.

ಈ ವೇಳೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು ಧರ್ಮಚಕ್ರ ಆರಾಧನಾ ಮಹೋತ್ಸವವು ಜಿಲ್ಲೆಯಲ್ಲಿನ ಐತಿಹಾಸಿಕ ಸ್ಥಳಗಳ ಸಂವರ್ಧನೆಗೆ ಮಹತ್ವ ಹೆಜ್ಜೆಯನ್ನಟ್ಟಿದೆ. ಹಲವಾರು ಬಾರಿ ಈ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಬೇಡಿಕೆಗಳು ಕೇಳಿ ಬಂದಿದ್ದವು. ಸುನೀಲ್ ಹನುಮಣ್ಣವರ ಅವರು ಇಲಾಖೆಯಿಂದ ಸಹಕಾರ ನೀಡಬೇಕೆಂದಾಗ ಕೋಟ್ಯಾಂತರ ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ. ಬೆಳಗಾವಿ, ಶಿವಮೊಗ್ಗ, ಮಂಡ್ಯ ಸೇರಿದಂತೆ ವಿವಿಧೆಡೆ ಜೈನ ಸಮಾಜದ ಮಠಗಳ ಅಭಿವೃದ್ಧಿಗೆ ಸುಮಾರು 10-15 ಕೋಟಿ ರೂಪಾಯಿ ಅನುದಾನವನ್ನು ನೀಡಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಿದ್ಧರಾಮಯ್ಯನವರ ಸರ್ಕಾರ ಅಲ್ಪಸಂಖ್ಯಾತರ ಏಳ್ಗೆಗೆ ಶ್ರಮಿಸುವ ಸರ್ಕಾರವಾಗಿದೆ. ಮುಂಬರುವ ದಿನಗಳಲ್ಲಿ ಈ ಐತಿಹಾಸಿಕ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು. ಕನ್ನಡ ಭಾಷೆಯ ಸಂವರ್ಧನೆಯಲ್ಲಿ ಜೈನ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು. ಈ ಧಾರ್ಮಿಕ ಉತ್ಸವದಲ್ಲಿ ವಿವಿಧ ಧರ್ಮ ಮತ್ತು ಸಂಪ್ರದಾಯಗಳ ಭಕ್ತಾದಿಗಳು ಪಾಲ್ಗೊಂಡು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.

Tags:

error: Content is protected !!