• ಹುಬ್ಬಳ್ಳಿ: ಒಂದೇ ಕುಟುಂಬದ ಐವರ ಮೇಲೆ ಆಸಿಡ್ ದಾಳಿ
• ಮೊಬೈಲ್ ಜಗಳಕ್ಕೆ ಆಸಿಡ್ ಎರಚಿದ ಕಿರಾತಕರು
• ಒಂದು ವರ್ಷದ ಕಂದಮ್ಮ ಸೇರಿ ಐವರಿಗೆ ಗಾಯ
• ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರ ಸ್ಥಿತಿ ಅತ್ಯಂತ ಚಿಂತಾಜನಕ

ಕ್ಷುಲ್ಲಕ ಕಾರಣಕ್ಕೆ ನಡೆದ ಮನೆಯೊಳಗಿನ ಜಗಳದ ವೇಳೆ ಒಂದೇ ಕುಟುಂಬದ ಐವರ ಮೇಲೆ ಆಸಿಡ್ ದಾಳಿ ನಡೆದ ಘಟನೆ ನಗರದ ತಾರಿಹಾಳದ ವಾಜಪೇಯಿ ನಗರದಲ್ಲಿ ಶನಿವಾರ ನಡೆದಿದೆ.

ಮೊಬೈಲ್ ವಿಚಾರವಾಗಿ ಮನೆಯಲ್ಲಿ ಜಗಳ ನಡೆದಿದ್ದು, ಈ ವೇಳೆ ತಾಮ್ರ ಹಾಗೂ ಹಿತ್ತಾಳೆ ತೊಳೆಯಲು ಬಳಸುತ್ತಿದ್ದ ಕೆಮಿಕಲ್‌ನ್ನು ಎರಚಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಒಂದು ವರ್ಷದ ಹೆಸರಿಡದ ಕಂದಮ್ಮ ಸೇರಿ ಐವರು ಗಾಯಗೊಂಡಿದ್ದಾರೆ.
33 ವರ್ಷದ ಸುರೇಶ್ ಬೈಲ್ ಪತ್ತಾರ ಹಾಗೂ 24 ವರ್ಷದ ರಾಜೇಶ್ವರಿ ಬೈಲ್ ಪತ್ತಾರ ಗಂಭೀರವಾಗಿ ಗಾಯಗೊಂಡಿದ್ದು, ಮುಖ ಹಾಗೂ ಬಾಯಿಗೆ ಆಸಿಡ್ ಬಿದ್ದ ಪರಿಣಾಮ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಶೃತಿ ಮತ್ತು ರೇಷ್ಮಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬದವರು ತಾಮ್ರ ಮತ್ತು ಹಿತ್ತಾಳೆ ತೊಳೆಯುವ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಇದ್ದ ಕೆಮಿಕಲ್‌ನಿಂದಲೇ ದಾಳಿ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆಸಿಡ್ ದಾಳಿ ನಡೆಸಿದವರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಘಟನೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
