Kagawad

ನಾಲ್ಕು ದಶಕಗಳ ಬಳಿಕ ಗುರುವಂದನೆ: ಕಾಗವಾಡದಲ್ಲಿ ಹಳೆ ವಿದ್ಯಾರ್ಥಿಗಳಿಂದ ಹಿರಿಯ ಶಿಕ್ಷಕರಿಗೆ ಸನ್ಮಾನ

Share

ವೀರಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳು ಸ್ಥಾಪಿಸಿದ ಕಾಗವಾಡದ ವಿದ್ಯಾವರ್ಧಕ ಶಿಕ್ಷಣ ಸಮಿತಿಯಲ್ಲಿ 1979-80ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳು ತಮಗೆ ಅಕ್ಷರ ಜ್ಞಾನ ನೀಡಿ, ಜೀವನಕ್ಕೆ ಮಾರ್ಗದರ್ಶನ ಮಾಡಿದ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸುವ ಮೂಲಕ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಭಾನುವಾರ ಬೆಳಗ್ಗೆ ಕಾಗವಾಡದ ಬಾಬನಗೌಡ ಪಾಟೀಲ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುನಮನ ಕಾರ್ಯಕ್ರಮ ಜರುಗಿತು.
ಸುಮಾರು ನಾಲ್ಕು ದಶಕಗಳ ಹಿಂದೆ ತಮಗೆ ವಿದ್ಯೆ ಕಲಿಸಿ, ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆ ನೀಡಿದ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಮತ್ತೆ ಭೇಟಿಯಾದ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿದರು. ಅಂದು ತಮಗೆ ಬೋಧನೆ ಮಾಡಿದ ಗುರುಗಳನ್ನು ಪುಷ್ಪವೃಷ್ಟಿಯೊಂದಿಗೆ ವೇದಿಕೆಗೆ ಬರಮಾಡಿಕೊಂಡ ಹಳೆ ವಿದ್ಯಾರ್ಥಿಗಳು, ಗುರುಗಳ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಗುರುಗಳಾದ ಎಸ್.ಎಂ. ಮಠಪತಿ, ಆರ್.ಎ. ಪಾಟೀಲ ಹಾಗೂ ಎಂ.ಬಿ. ಉದಗಾವೆ ಮಾತನಾಡಿ, ನಾಲ್ಕು ದಶಕಗಳ ಹಿಂದೆ ತಾವು ಬೋಧಿಸಿದ ವಿದ್ಯಾರ್ಥಿಗಳು ಇಂದಿಗೂ ತಮ್ಮನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸುತ್ತಿರುವುದು ಮನಸ್ಸಿಗೆ ಅಪಾರ ತೃಪ್ತಿ ತಂದಿದೆ. ವಿದ್ಯಾರ್ಥಿಗಳೆಲ್ಲರೂ ಜೀವನದಲ್ಲಿ ಸುಖ-ಸಮೃದ್ಧಿಯಿಂದ ಬಾಳಬೇಕು, ಆರೋಗ್ಯವಂತರಾಗಿರಬೇಕು. ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಿಮ್ಮ ಸಾಧನೆ ನಮಗೆ ಸಂತೋಷ ತಂದಿದೆ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ನಿವೃತ್ತ ಡಿವೈಎಸ್ಪಿ ಬಾಬಾಸಾಹೇಬ ಹುಲ್ಲನವರ, ಕೆಎಲ್‌ಇ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಆರ್.ಎನ್. ಪಾಟೀಲ, ಮಿರಜ್ ಹೈಸ್ಕೂಲಿನ ನಿವೃತ್ತ ಪ್ರಾಚಾರ್ಯ ಡಿ.ಜಿ. ಲಾಂಡಗೆ, ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಐ.ಎನ್. ಸಲಗರ, ಎಂಜಿನಿಯರ್ ಎಂ.ಬಿ. ಪಾಟೀಲ ಸೇರಿದಂತೆ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳ ಪಾದಗಳಿಗೆ ನಮಸ್ಕರಿಸಿ ಗುರುವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಳೆ ವಿದ್ಯಾರ್ಥಿಗಳು, ಗುರುಗಳು ಬೋಧಿಸಿದ ಜ್ಞಾನ ಮತ್ತು ನೀಡಿದ ಮಾರ್ಗದರ್ಶನದಿಂದಲೇ ತಮ್ಮ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು. ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸಲು ಸಾಧ್ಯವಾಗಿರುವುದು ಸಂತೃಪ್ತಿ ತಂದಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

1979-80ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿದ ಸುಮಾರು 80 ಹಳೆ ವಿದ್ಯಾರ್ಥಿಗಳ ಪೈಕಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂದು ಇವರಿಗೆ ಬೋಧನೆ ಮಾಡಿದ ಒಟ್ಟು 32 ಗುರುಗಳ ಪೈಕಿ ಮೂವರು 80 ವರ್ಷ ಮೇಲ್ಪಟ್ಟ ಹಿರಿಯ ಗುರುಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಉಳಿದ ಗುರುಗಳ ಪೈಕಿ ಹಲವರು ಈಗಾಗಲೇ ನಿಧನರಾಗಿದ್ದು, ಅವರನ್ನು ಹಳೆ ವಿದ್ಯಾರ್ಥಿಗಳು ಭಾವುಕವಾಗಿ ಸ್ಮರಿಸಿದರು. ಹಲವು ದಶಕಗಳ ನಂತರವೂ ಗುರುಗಳನ್ನು ನೆನಪಿಸಿಕೊಂಡು ಗೌರವಿಸಿದ ಹಳೆ ವಿದ್ಯಾರ್ಥಿಗಳ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಹಾಗೂ ನ್ಯಾಯವಾದಿ ಕಾಕಾ ಪಾಟೀಲ ವಹಿಸಿದ್ದರು. ಬಾಬನಗೌಡ ಪಾಟೀಲ ಕನ್ನಡ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕ ಎಸ್.ಕೆ. ಅಳಗುಂಡಿ, ಮಾಜಿ ವಿದ್ಯಾರ್ಥಿಗಳಾದ ನಿವೃತ್ತ ಅಧಿಕಾರಿ ಎಸ್.ಕೆ. ಮಗದುಮ್, ಆರ್.ಬಿ. ಗಂಗಾವತಿ, ಎಸ್.ಬಿ. ಕೋಳಿಕರ್, ನಿವೃತ್ತ ಪ್ರಾಚಾರ್ಯ ಎಂ.ಎನ್. ದಾನನ್ನವರ, ಪ್ರಗತಿಪರ ರೈತ ಎಂ. ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುಕುಮಾರ್ ಬನ್ನುರೆ
ಇನ್ ನ್ಯೂಸ್ ಕಾಗವಾಡ

Tags:

error: Content is protected !!