ಬೆಳಗಾವಿಯಲ್ಲಿ ಸ್ಥಳೀಯ ಕ್ರಿಕೆಟ್ ಹಬ್ಬ ಜೋರಾಗಿದೆ. ಕಾಮತ್ ಗಲ್ಲಿಯ ಶಿವಶಕ್ತಿ ಯುವಕ ಮಂಡಳ ಆಯೋಜಿಸಿದ್ದ ಸೀಸನ್-3 ಫುಲ್ ಪಿಚ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ, ಸಂಯುಕ್ತ ಹನುಮಾನ್ ತಾಲೀಮ್ ಮೆನಸೆ ಗಲ್ಲಿ ತಂಡ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

ಬೆಳಗಾವಿಯ ಕಾಮತ್ ಗಲ್ಲಿ ವಿಭಾಗದ ಶಿವಶಕ್ತಿ ಯುವಕ ಮಂಡಳದ ವತಿಯಿಂದ ಆಯೋಜಿಸಲಾಗಿದ್ದ ಸೀಸನ್-3 ಫುಲ್ ಪಿಚ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ರೋಚಕವಾಗಿ ನಡೆದ ಅಂತಿಮ ಪಂದ್ಯದಲ್ಲಿ ಬ್ರಹ್ಮಲಿಂಗ 11 (ಆಜಾದ್ ಗಲ್ಲಿ) ತಂಡವನ್ನು ಮಣಿಸಿದ ಸಂಯುಕ್ತ ಹನುಮಾನ್ ತಾಲೀಮ್ ಮೆನಸೆ ಗಲ್ಲಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೊದಲು ಬ್ಯಾಟಿಂಗ್ ಮಾಡಿದ ಬ್ರಹ್ಮಲಿಂಗ 11 ತಂಡ 6 ಓವರ್ಗಳಲ್ಲಿ 37 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಹನುಮಾನ್ ತಾಲೀಮ್ ಬ್ಯಾಟರ್ಗಳು ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದು ಕೇವಲ 5 ಓವರ್ಗಳಲ್ಲೇ 37 ರನ್ ಗಳಿಸುವ ಮೂಲಕ ಒಂದು ಓವರ್ ಬಾಕಿ ಇರುವಂತೆಯೇ ಭರ್ಜರಿ ಗೆಲುವು ದಾಖಲಿಸಿದರು.
ಪ್ರಾಯೋಜಕರಾದ ವಿಶಾಲ್ ತಶೀಲ್ದಾರ್ ಅವರು ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಿದರು. ಪಂದ್ಯಾವಳಿಯಲ್ಲಿ ಹೃಷಿಕೇಶ್ ರಜಪೂತ್ ಸರಣಿ ಶ್ರೇಷ್ಠ, ಶಂಭು ಉತ್ತಮ ಬ್ಯಾಟ್ಸ್ಮನ್, ಸೌರಭ್ ಕದಂ ಉತ್ತಮ ಬೌಲರ್, ಸ್ವಸ್ತಿಕ್ ಫೈನಲ್ ಪಂದ್ಯಶ್ರೇಷ್ಠ, ಮಯೂರೇಶ್ ಘಸಾರಿ ಹಾಗೂ ಪ್ರಣವ್ ಬಡಸ್ಕರ್ ಉದಯೋನ್ಮುಖ ಆಟಗಾರರು ಮತ್ತು ಗೀತನ್ ಕಡೆಮನಿ ಹಿರಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು. ಸಮಾರಂಭದಲ್ಲಿ ರಾಜು ಪಾಟೀಲ್, ಸಿದ್ದಪ್ಪ ಕುಟ್ರೆ, ಚಿಂತಾಮಣಿ ಘಸಾರಿ, ಅನಿಲ್ ಬಡಮಂಜಿ, ದೀಪಕ್ ಗಾಯಕ್ವಾಡ್, ಇರ್ಫಾನ್ ಬಾಳೇಕುಂದ್ರಿ, ವಿಜಯ್ ಮೋಹಿತೆ, ರಾಜು ಹಲಗೇಕರ್ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದು, ಜಯಸಿಂಗ್ ರಜಪೂತ್ ಕಾರ್ಯಕ್ರಮ ನಿರೂಪಿಸಿದರು.
