Belagavi

ಉತ್ತರ ಕರ್ನಾಟಕಕ್ಕೆ ನಾರಾಯಣಗೌಡರು ನ್ಯಾಯ ಕೊಡಿಸಲಿ…; ಡಾ. ಪ್ರಭಾಕರ ಕೋರೆ

Share

ಕನ್ನಡಿಗರು ಟಿ. ಎ. ನಾರಾಯಣಗೌಡರನ್ನು ಮುಖ್ಯಮಂತ್ರಿಗಿಂತಲೂ ಹೆಚ್ಚಿನ ಸ್ಥಾನದಲ್ಲಿ ನೋಡುತ್ತಾರೆ. ನಾರಾಯಣ ಗೌಡರು ಕೂಗಿದರೆ ಸರ್ಕಾರವೇ ಅಲುಗಾಡುತ್ತದೆ ಎಂದಿರುವ ಅವರು, ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡಿಸುವಂತೆ ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮನವಿ ಮಾಡಿದ್ದಾರೆ.

ಬೆಳಗಾವಿಯ ನಗರದ ಜೀರಗೆ ಸಭಾಭವನದಲ್ಲಿ ಭಾನುವಾರ ತಂಬೂರಿ ಜನಪದ ಕನ್ನಡ ತಂಡದ ವತಿಯಿಂದ ಆಯೋಜಿಸಿದ್ದ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಕಾರ್ಯಕ್ರಮದಲ್ಲಿ 32 ಸಾಧಕರಿಗೆ ‘ಕರ್ನಾಟಕ ಸಾರ್ವಭೌಮ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ, ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕನ್ನಡಿಗರು ಟಿ. ಎ. ನಾರಾಯಣ ಗೌಡರನ್ನು ಮುಖ್ಯಮಂತ್ರಿಗಿಂತಲೂ ಹೆಚ್ಚಿನ ಸ್ಥಾನದಲ್ಲಿ ನೋಡುತ್ತಾರೆ ಎಂದರು. ಯಾರೇ ಸಿಎಂ ಆದರೂ ನಾರಾಯಣ ಗೌಡರು ಬಂದರೆ ಎದ್ದು ನಿಲ್ಲಲೇಬೇಕು ಎಂದು ಹೇಳಿದ ಅವರು, ತಮ್ಮನ್ನು ನಾರಾಯಣ ಗೌಡರು ಸತ್ಕರಿಸಿದ್ದು ಇಡೀ ಉತ್ತರ ಕರ್ನಾಟಕದ ಜನರನ್ನು ಸತ್ಕರಿಸಿದಷ್ಟೇ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಯಾರೇ ಬಂದರೂ ಬೆಳಗಾವಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ, ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ ಕೋರೆ, ಮೊದಲು ಬೆಂಗಳೂರಿನಲ್ಲಿ ಕನ್ನಡ ಉಳಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ಹಿಂಜರಿಕೆ ಬರುವಂತಹ ಹಾಗೂ ಕನ್ನಡ ಮಾತಾಡುವ ಜನರೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊದಲು ರಾಜಧಾನಿಯಲ್ಲಿ ಕನ್ನಡವನ್ನು ಉಳಿಸುವ ಕೆಲಸವಾಗಬೇಕು. ಬೆಂಗಳೂರಿನಲ್ಲಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂದು ಒತ್ತಾಯಿಸಿದರು .

ಕಳೆದ 30–40 ವರ್ಷಗಳಿಂದ ಮನೆ ಹಾಗೂ ಸಂಪತ್ತಿನ ಕಡೆ ಗಮನಹರಿಸದೆ, ಕರ್ನಾಟಕ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಒಬ್ಬರೇ ನಿರಂತರ ಹೋರಾಟ ನಡೆಸಿಕೊಂಡು ಬಂದಿರುವವರು ನಾರಾಯಣ ಗೌಡ ಅವರು ಎಂದು ಶಾಸಕ ಆಸೀಫ್ ಸೇಠ್ ಶ್ಲಾಘಿಸಿದರು. ಕನ್ನಡಪರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕನ್ನಡ ಭಾಷೆ ಮುಂದುವರಿಯಬೇಕು ಎಂಬ ಬಲವಾದ ಇಚ್ಛೆ ಹಾಗೂ ಶಕ್ತಿ ನಾರಾಯಣ ಗೌಡರಲ್ಲಿ ಇದೆ ಎಂದು ತಿಳಿಸಿದರು. ಜೊತೆಗೆ, ಸುಮಾರು ಒಂದೆರಡು ತಿಂಗಳ ಹಿಂದೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ನಾರಾಯಣ ಗೌಡರಿಗೆ ಯಾವುದೇ ಪಕ್ಷದಿಂದ ಅಲ್ಲದಿದ್ದರೂ ಸ್ವತಂತ್ರವಾಗಿಯಾದರೂ ಎಲ್ಲಿಂದಲಾದರೂ ಸ್ಪರ್ಧಿಸಿ ವಿಧಾನಸಭೆಗೆ ಬರುವಂತೆ ಹೇಳಿದ್ದನ್ನು ನೆನಪಿಸಿದ ಅವರು, ರಾಜ್ಯಪರ ಧ್ವನಿಯಿಂದ ವಿಧಾನಸಭೆಗೆ ಶಕ್ತಿ ಬರಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಪರ ಹೋರಾಟದ ಜತೆಗೆ ನ್ಯಾಯಪರ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದೆ. ಭಾಷೆ, ನೆಲ ಮತ್ತು ಜಲದ ರಕ್ಷಣೆಗಾಗಿ ಎಲ್ಲರೂ ಸಂಘಟನೆಯೊಂದಿಗೆ ಕೈಜೋಡಿಸಬೇಕು. ಬೆಂಗಳೂರಿನಲ್ಲಿ ಕರವೇ ಕೇಂದ್ರ ಕಚೇರಿ ನಿರ್ಮಾಣಕ್ಕೆ ನಿಧಿ ಸಂಗ್ರಹಕ್ಕೆ ಸಹಕಾರ ನೀಡಬೇಕು ಎಂದರು.

ಈ ವೇಳೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣ ಗೌಡ ಅವರು, ಪದವಿ ಪಡೆದ ಲಕ್ಷಾಂತರ ಕನ್ನಡಿಗ ಯುವಜನರು ಉದ್ಯೋಗಕ್ಕಾಗಿ ಹೊರರಾಜ್ಯ ಹಾಗೂ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಹೊರರಾಜ್ಯಗಳಿಂದ ಬಂದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತಿದ್ದು, ಸ್ಥಳೀಯ ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಉದ್ಯಮ ಸ್ಥಾಪಿಸಿರುವವರು ಕನ್ನಡಿಗರಿಗೆ ಉದ್ಯೋಗ ನೀಡುವ ಮೂಲಕ ನೆಲದ ಋಣ ತೀರಿಸಬೇಕು. ಐಟಿ-ಬಿಟಿ ಕಂಪನಿಗಳು ಕನ್ನಡಿಗ ಯುವಜನರಿಗೆ ಉದ್ಯೋಗ ನೀಡಲು ಆದ್ಯತೆ ನೀಡಬೇಕು. ಉದ್ಯಮಿಗಳ ಲಾಭದಲ್ಲಿ ಪಾಲು ಕೇಳುತ್ತಿಲ್ಲ, ದುಡಿಯಲು ಅವಕಾಶ ಕೇಳುತ್ತಿದ್ದೇವೆ. ಇದು ಕನ್ನಡಿಗರ ಹಕ್ಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಉಪಮೇಯರ್ ಹನುಮಂತ ಕೊಂಗಾಲಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ ಗವನ್ನವರ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಸ್ವಾಗತಿಸಿದರು.

Tags:

error: Content is protected !!