Kagawad

ಉಗಾರ ಲಯನ್ಸ್ ಕ್ಲಬ್‌ಗೆ ಝೋನಲ್ ಚೇರ್ಮನ್ ಡಾ. ಅಶೋಕ ಮುರಗೋಡ ಭೇಟಿ: ನೂತನ ನಿರ್ದೇಶಕ ಜ್ಯೋತಿಕುಮಾರ ಪಾಟೀಲಗೆ ಸನ್ಮಾನ!

Share

ಸಮಾಜದಲ್ಲಿ ಲಯನ್ಸ್ ಕ್ಲಬ್ ಸಂಸ್ಥೆಯು ನಿಸ್ವಾರ್ಥ ಸಮಾಜಸೇವೆಗೆ ಹೆಸರುವಾಸಿಯಾಗಿದೆ. ಉಗಾರದ ಸಕ್ಕರೆ ಉದ್ಯಮಿ ದಿವಂಗತ ರಾಜಾಭಾವು ಶಿರಗಾಂವ್ಕರ್ ಅವರು ಸ್ಥಾಪಿಸಿದ ಉಗಾರ ಲಯನ್ಸ್ ಕ್ಲಬ್ ಶಾಖೆಯು ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಝೋನಲ್ ಚೇರ್ಮನ್ ಡಾ. ಅಶೋಕ ಮುರಗೋಡ ಹೇಳಿದರು.

ಶುಕ್ರವಾರ ಸಂಜೆ ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಭೇಟಿ ನೀಡಿ, ಶಾಖೆಯ ಪ್ರಗತಿ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದು, ಅಗತ್ಯ ಸಲಹೆ-ಸೂಚನೆಗಳನ್ನು ನೀಡುತ್ತಾ ಅವರು ಮಾತನಾಡಿದರು. ಈ ಶಾಖೆಯ ಮಾಜಿ ಅಧ್ಯಕ್ಷ ಜ್ಯೋತಿಕುಮಾರ್ ಪಾಟೀಲ ಅವರನ್ನು ಕರ್ನಾಟಕ ಸರ್ಕಾರವು ಸುಕ್ಷೇತ್ರ ಸವದತ್ತಿಯ ಶ್ರೀ ರೇಣುಕಾದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಲಯನ್ಸ್ ಕ್ಲಬ್ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಮೋಹನ ಕಟಗೇರಿ ಸ್ವಾಗತಿಸಿ, ಕ್ಲಬ್ ಸದಸ್ಯರು ಹಮ್ಮಿಕೊಂಡಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯದರ್ಶಿ ಪಂಡಿತ್ ಆನಂದ ಕುಂಬಾರ ಅವರು ಕಳೆದ ಆರು ತಿಂಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಯೋಜನೆಗಳ ಕುರಿತು ವಿವರಿಸಿದರು.

ಇದೇ ಸಂದರ್ಭದಲ್ಲಿ ಉಗಾರ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ ಅವರನ್ನು ರಾಜ್ಯ ಸರ್ಕಾರವು ಸೌದತ್ತಿಯ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿಯ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಕ್ಲಬ್‌ನ ಸದಸ್ಯರು ಒಗ್ಗೂಡಿ ಅವರನ್ನು ಸನ್ಮಾನಿಸಿ, ಮುಂದಿನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜ್ಯೋತಿಕುಮಾರ ಪಾಟೀಲ, “ರಾಜ್ಯ ಸರ್ಕಾರ ನನ್ನ ಮೇಲೆ ವಿಶ್ವಾಸವಿಟ್ಟು ಈ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಶ್ರೀ ರೇಣುಕಾದೇವಿಯ ದರ್ಶನ ಪಡೆಯಲು ಕರ್ನಾಟಕ ಮತ್ತು ಮಹಾರಾಷ್ಟ್ರ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಸುಮಾರು ₹500 ಕೋಟಿ ಅನುದಾನ ಒದಗಿಸಲಾಗಿದೆ. ಸುಕ್ಷೇತ್ರ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಸೌದತ್ತಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಈ ಜವಾಬ್ದಾರಿಯಲ್ಲಿ ಉತ್ತಮ ಸೇವೆ ಸಲ್ಲಿಸಲು ಎಲ್ಲರೂ ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು” ಎಂದು ಮನವಿ ಮಾಡಿದರು.ಬೈಟ್: ಜ್ಯೋತಿಕುಮಾರ ಪಾಟೀಲ, ನಿರ್ದೇಶಕರು, ಶ್ರೀ ರೇಣುಕಾದೇವಿ ದೇವಸ್ಥಾನ ಅಭಿವೃದ್ಧಿ ಸಮಿತಿ.

ಸಮಾರಂಭದಲ್ಲಿ ಗೋಕಾಕ ಲಯನ್ಸ್ ಕ್ಲಬ್ ಅಧ್ಯಕ್ಷ ಶಂಕರ ದೊಡ್ಮನಿ, ಉಗಾರ ಕ್ಲಬ್ ಉಪಾಧ್ಯಕ್ಷ ಪಿ.ಬಿ. ಕುಲಕರ್ಣಿ, ರಾಜೇಂದ್ರ ಪೋತದಾರ, ಪಾಯಪ್ಪ ಕುಡುವಕಲಗಿ, ಡಾ. ಬಿ.ಎ. ಪಾಟೀಲ, ಬಿ.ಎನ್. ಜೋಗುಳೆ, ಮನೋಜ ಮಾಲಗತ್ತೆ, ಡಾ. ಎಸ್.ಬಿ. ಸಾಬಡೆ, ರಾಹುಲ ಶಹಾ, ಮನೀಷ ಶಹಾ, ಡಾ. ಬಾಬಾಗೌಡ ಪಾಟೀಲ, ಮಹದೇವ ದಾನನ್ನವರ, ಬಿ.ಬಿ. ಕಾಗೆ, ಸುಭಾಷ ಹೆಬ್ಬಳ್ಳಿ, ಎಸ್.ಬಿ. ಭಟ್, ಸಚಿನ್ ಪೋತದಾರ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!