ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರೂ, ಕಾಗವಾಡ ಪಟ್ಟಣದ ಮೂಲಕ ಹಾದುಹೋಗುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಸ್ತೆ ಸುಧಾರಣೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಂಗಳವಾರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಮಂಗಳವಾರ ಬೆಳಗ್ಗೆ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸಲು ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಜಯಪುರ ವಿಭಾಗದ ಅಧಿಕಾರಿಗಳಾದ ವಿವೇಕ್ ಮಠ್ ಮತ್ತು ವಿಜಯ ಪಾಟೀಲ ಅವರು, ಪ್ರತಿಭಟನಾಕಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ, “ಇಂತಹ ಪ್ರತಿಭಟನೆಗಳನ್ನು ಅದೆಷ್ಟೋ ನೋಡಿದ್ದೇವೆ. ಇವು ನಡೆಯುತ್ತಲೇ ಇರುತ್ತವೆ. ಪತ್ರಿಕೆಗಳಲ್ಲಿ ದೊಡ್ಡದಾಗಿ ಪ್ರಕಟಿಸಿ” ಎಂದು ಅಸಡ್ಡೆ ಹಾಗೂ ದರ್ಪದ ಮಾತುಗಳನ್ನಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾಗವಾಡ ಪಟ್ಟಣದ ಮೂಲಕ ಹಾದುಹೋಗುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ಸೇನೆ, ಕಿತ್ತೂರು ಕರ್ನಾಟಕ ಸೇನೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪಟ್ಟಣದ ಸಾರ್ವಜನಿಕರು ರಸ್ತೆ ತಡೆ ನಡೆಸಿದರು.
ಈ ಸಂದರ್ಭದಲ್ಲಿ ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ್ ಹಾಗೂ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, “ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿವೆ. ಆದರೆ, ರಸ್ತೆ ತಡೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳಕ್ಕೆ ಆಗಮಿಸುವಂತೆ ತಿಳಿಸಲಾಗಿದೆ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಗ್ರೇಡ್-2 ತಹಶೀಲ್ದಾರ್ ರಶ್ಮಿ ಜಕಾತಿ, ಪಿಎಸ್ಐ ರಾಘವೇಂದ್ರ ಖೋತ್, ಶ್ರೀ ರೇಣುಕಾದೇವಿ ಮಂದಿರ ಪ್ರಾಧಿಕಾರದ ನಿರ್ದೇಶಕ ಜ್ಯೋತಿಕುಮಾರ್ ಪಾಟೀಲ್, ನ್ಯಾಯವಾದಿ ಕಾಕಾ ಪಾಟೀಲ್, ರಾಹುಲ್ ಕಟಗೇರಿ, ರಮೇಶ್ ಚೌಗುಲೆ, ಕರವೇ ಅಧ್ಯಕ್ಷ ಸಿದ್ದು ವಡೇಯರ್, ಶಿವಾನಂದ ನವಿನಾಳೆ, ಪ್ರವೀಣ ಪಾಟೀಲ್, ರವೀಂದ್ರ ಪಾಟೀಲ್, ಗಣೇಶ್ ಕೋಳೆಕರ್, ಫಾರುಕ್ ಅಲಾಸ್ಕರ್, ವಿನಾಯಕ್ ಕಾಂಬಳೆ ಸೇರಿದಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುಕುಮಾರ್ ಬನ್ನುರೆ
ಇನ್ನ ನ್ಯೂಸ್ ಕಾಗವಾಡ
