ವಿಶ್ವಶಾಂತಿ ನೆಲೆಸುವುದರೊಂದಿಗೆ ಸಕಾಲದಲ್ಲಿ ಮಳೆ-ಬೆಳೆಯಾಗಿ ಜನರು ಹಾಗೂ ಜಾನುವಾರುಗಳಿಗೆ ನೀರು ಲಭಿಸಿ, ನಾಡಿನಲ್ಲಿ ಸುಖ-ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಉಗಾರ ಗ್ರಾಮದ ಅಯ್ಯಪ್ಪ ಸ್ವಾಮಿ ಭಕ್ತ ಸೋಮನಾಥ್ ಹೂಗಾರ ಅವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಸುಮಾರು 6,000 ಕಿ.ಮೀ. ದೂರದ ವೈಷ್ಣೋದೇವಿಯಿಂದ ಶಬರಿಮಲೆಯವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.

ರವಿವಾರ ಸಂಜೆ ಉಗಾರ ಬುದ್ರುಕ ಗ್ರಾಮದ ಶ್ರೀ ಮುರುಗುಬಾಯಿ ದೇವಿ ಮಂದಿರದಲ್ಲಿ ಸೋಮನಾಥ್ ಹೂಗಾರ ಸ್ವಾಮಿ ಅವರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಪೂರ್ವಭಾವಿಯಾಗಿ ಸದಲಗಾ ಗ್ರಾಮದ ರವಿ ಗುರುಸ್ವಾಮಿ ಅವರು ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು.
ಅಯ್ಯಪ್ಪ ಸ್ವಾಮಿಯ ಮೇಲಿನ ಅಪಾರ ಭಕ್ತಿ ಹಾಗೂ ಶ್ರದ್ಧೆಯಿಂದ ಯಾತ್ರೆ ಕೈಗೊಂಡಿರುವ ಸೋಮನಾಥ್ ಹೂಗಾರ ಅವರು ಕಳೆದ 9 ವರ್ಷಗಳಿಂದ ನಿರಂತರವಾಗಿ ಸುಕ್ಷೇತ್ರ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಈ ಹಿಂದೆ ಉಗಾರದಿಂದ ಶಬರಿಮಲೆಗೆ, ಸುಕ್ಷೇತ್ರ ಅಯೋಧ್ಯೆಯ ಶ್ರೀರಾಮ ಮಂದಿರದಿಂದ ಶಬರಿಮಲೆಗೆ ಹಾಗೂ ಕೇದಾರನಾಥದಿಂದ ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದರು. ಇದೀಗ ವೈಷ್ಣೋದೇವಿಯಿಂದ ತಮ್ಮ ಸೈಕಲ್ ಯಾತ್ರೆ ಆರಂಭಿಸಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತಲುಪಿ ದರ್ಶನ ಪಡೆಯುವ ಸಂಕಲ್ಪ ಹೊಂದಿದ್ದಾರೆ. ಅವರ ಈ ಧಾರ್ಮಿಕ ಯಾತ್ರೆ ಭಕ್ತಿ, ನಿಷ್ಠೆ, ಧೈರ್ಯ ಹಾಗೂ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.
ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸದಲಗಾದ ದರೇಶ್ವರ ಅಪ್ಪಾಜಿ ಅವರು ಸೋಮನಾಥ್ ಹೂಗಾರ ಅವರಿಗೆ ಆಶೀರ್ವದಿಸಿ, ವಿಶ್ವಶಾಂತಿ ಹಾಗೂ ಲೋಕಕಲ್ಯಾಣಕ್ಕಾಗಿ ಕೈಗೊಂಡಿರುವ ಈ ಕಠಿಣ ಯಾತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾತ್ರೆಯ ಸಂದರ್ಭದಲ್ಲಿ ಪಾಲಿಸಬೇಕಾದ ಕೆಲವು ಸೂಚನೆಗಳನ್ನು ನೀಡಿ, ಸೈಕಲ್ ಪ್ರವಾಸಕ್ಕೆ ಶುಭ ಹಾರೈಸಿದರು. “ಇದೇ ರೀತಿ ಭಕ್ತಿ ಬೆಳೆಯಲಿ. ಇಂದಿನ ಯುವಕರು ಇಂತಹ ಯುವಕರಿಂದ ಪ್ರೇರಣೆ ಪಡೆಯಬೇಕು. ಪ್ರತಿಯೊಬ್ಬರೂ ದೇವರ ಬಗ್ಗೆ ಭಯ-ಭಕ್ತಿ ಹೊಂದುವುದರೊಂದಿಗೆ ಇತರರ ಬಗ್ಗೆಯೂ ಒಳ್ಳೆಯ ವಿಚಾರಗಳನ್ನು ಹೊಂದಿರಬೇಕು” ಎಂದು ಸಲಹೆ ನೀಡಿದರು.
ಶಿರಗುಪ್ಪಿಯ ಖ್ಯಾತ ವೈದ್ಯರಾದ ಡಾ. ಅಮೂಲ್ ಶರಡೆ ಅವರು ಮಾತನಾಡಿ, “ಸೋಮನಾಥ್ ಹೂಗಾರ ಅವರಲ್ಲಿರುವ ದೇವರ ಮೇಲಿನ ಭಕ್ತಿ ಹಾಗೂ ಕಷ್ಟಗಳನ್ನು ಎದುರಿಸುವ ಶಕ್ತಿ ಮೆಚ್ಚುವಂತಹದ್ದು. ವೈಷ್ಣೋದೇವಿಯಿಂದ ಶಬರಿಮಲೆಯವರೆಗೆ ಸುಮಾರು 6,000 ಕಿ.ಮೀ. ಸೈಕಲ್ ಯಾತ್ರೆ ಕೈಗೊಂಡಿರುವುದು ನಮ್ಮ ಪರಿಸರದ ಇತರ ಯುವಕರಿಗೂ ಮಾದರಿಯಾಗಿದೆ. ಸಕಾಲದಲ್ಲಿ ಮಳೆ-ಬೆಳೆಯಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂಬ ಉದ್ದೇಶದಿಂದ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತು ಯಾತ್ರೆ ಕೈಗೊಂಡಿರುವ ಇಂತಹ ಧೈರ್ಯವಂತ ವ್ಯಕ್ತಿಯನ್ನು ಸನ್ಮಾನಿಸುವುದು ನಮ್ಮ ಭಾಗ್ಯವಾಗಿದೆ” ಎಂದರು.
ಈ ಸಂದರ್ಭದಲ್ಲಿ ಶೇಡಬಾಳದ ಸಾಗರ ಕಲಾಲ್, ಅಪ್ಪು ಪೂಜಾರಿ ಹಾಗೂ ಸೋನು ಕಲಾಲ್ ಎಂಬ ಮೂವರು ಯುವಕರು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದರು. ಅಯ್ಯಪ್ಪ ಸ್ವಾಮಿ ಭಕ್ತರಾದ ಸೌರಭ ಧರ್ಮರ, ಭೀಮರಾವ್ ಅರಳಿಕಟ್ಟಿ, ಸತೀಶ್ ಬೆಳಗಲಿ, ಶಶಿಕಾಂತ ಕಮತೆ, ಅವರ ಕುಟುಂಬಸ್ಥರು ಹಾಗೂ ಉಗಾರ ಗ್ರಾಮದ ಅಯ್ಯಪ್ಪ ಸ್ವಾಮಿ ಭಕ್ತರು ಉಪಸ್ಥಿತರಿದ್ದರು.
ನಂತರ ಸೋಮನಾಥ್ ಹೂಗಾರ ಅವರು ಉಗಾರದಿಂದ ವೈಷ್ಣೋದೇವಿಗೆ ತೆರಳಲು ತಮ್ಮ ಪ್ರಯಾಣ ಆರಂಭಿಸಿದರು.
*ಸುಕುಮಾರ್ ಬನ್ನುರೆ, ಇನ್ ನ್ಯೂಸ್, ಕಾಗವಾಡ*
