ರೈತರು ತಾವು ಬೆಳೆದ ಕಬ್ಬನ್ನು ಸಾಗಿಸಲು ಪರಸ್ಪರ ಸಹಕರಿಸಬೇಕು. ಪ್ರತಿಯೊಬ್ಬ ರೈತರೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಸುಮಾರು 500 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬಿನ ಸಾಗಾಟಕ್ಕೆ ಅನುಕೂಲವಾಗುವಂತೆ 30 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಗುಣಮಟ್ಟದ ರಸ್ತೆ ನಿರ್ಮಾಣವಾಗಲು ಎಲ್ಲ ರೈತರೂ ಸಹಕರಿಸಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.
ಶನಿವಾರ ಬೆಳಗ್ಗೆ ಉಗಾರದ ಬಾರಿಗಡ್ಡಿ ಮಾರ್ಗದ ರಾಜು ಕಾಂಬಳೆ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.ಬಾರಿಗಡ್ಡಿ ರಸ್ತೆಯ ಮೂಲಕ ಸುಮಾರು 500 ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಕಬ್ಬನ್ನು ಸಾಗಾಟ ಮಾಡಲಾಗುತ್ತದೆ. ಈ ಭಾಗದ ರೈತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಗಮನಿಸಿ ಈ ಹಿಂದೆ ರಸ್ತೆ ಅಗಲೀಕರಣ ಮಾಡಲಾಗಿತ್ತು. ಇದೀಗ 30 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ಈ ಭಾಗದ ಅನೇಕ ರೈತರಿಗೆ ಕಬ್ಬು ಸಾಗಾಟ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಾಸಕರ ಆಪ್ತಮಿತ್ರ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಕಾಂಬಳೆ ಮಾತನಾಡಿ, ಈ ಭಾಗದ ರೈತರ ಸಮಸ್ಯೆಗಳನ್ನು ಆಲಿಸಿದ ಶಾಸಕ ರಾಜು ಕಾಗೆ ಅವರು ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಇದೀಗ ಡಾಂಬರೀಕರಣ ಕಾಮಗಾರಿಗೂ ಚಾಲನೆ ನೀಡಿದ್ದಾರೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಶಾಸಕರ ಜನಪರ ಸೇವೆಯನ್ನು ಈ ಭಾಗದ ಪ್ರತಿಯೊಬ್ಬ ರೈತರೂ ಸ್ಮರಿಸಲಿದ್ದಾರೆ ಎಂದರು.
ಆರಂಭದಲ್ಲಿ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೊಡೆ, ಪರಶುನಾಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲಗೌಡ ಪಾಟೀಲ, ರಾಜು ಕಾಂಬಳೆ ಹಾಗೂ ಪ್ರೇಮ ಬಾಲಾಜಿ ಅವರು ಪೂಜೆ ನೆರವೇರಿಸಿದರು. ಅಭಿಯಂತರ ಸತೀಶ್ ಶಂಕರಹಟ್ಟಿ ಹಾಗೂ ಗುತ್ತಿಗೆದಾರ ಸತೀಶ್ ಶಿಂದೆ ಅವರು ಶಾಸಕರಿಗೆ ಕಾಮಗಾರಿಯ ಮಾಹಿತಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವಿನಾಯಕ ಕಾಂಬಳೆ, ತಾನಾಜಿ ಶೆಟ್ಟಿ, ನಾಸಿರ್ ಪಠಾಣ್, ಅಪ್ಪಾಸಾಹೇಬ ಐಹೊಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
