Dharwad

ಕುಡಿಯುವ ನೀರಿಗೆ ಮಾತ್ರ ಮಲಪ್ರಭಾ ನೀರು: ಕೃಷಿಗೆ ಬಳಸದಂತೆ ಧಾರವಾಡ ಜಿಲ್ಲಾಡಳಿತ ಖಡಕ್ ಆದೇಶ

Share

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಲಪ್ರಭಾ ನದಿಯಿಂದ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ ಕೇವಲ ಕುಡಿಯುವ ನೀರಿಗೆ ಮಾತ್ರ ಕಾಲುವೆ ನೀರು ಬಳಕೆ ಮಾಡಬೇಕು ಎಂದು ಜಿಲ್ಲಾಡಳಿತ ಆದೇಶಿಸಿದೆ. ಇತ್ತ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕನಿಷ್ಠ ಐದು ದಿನವಾದರೂ ಕೃಷಿ ಭೂಮಿಗೆ ನೀರು ಹರಿಸಲು ಅವಕಾಶ ನೀಡುವಂತೆ ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ರೈತರ ಮಾತುಗಳೇನು, ಈ ಸ್ಟೋರಿ ನೋಡಿ.

ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ 15 ಗ್ರಾಮಗಳಲ್ಲಿ 17 ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಮಲಪ್ರಭಾ ನದಿಯಿಂದ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ 68 ಕೆರೆಗಳ ಪೈಕಿ 55 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರಲ್ಲಿ 4 ಕೆರೆಗಳು ಶೇಕಡಾ 75ರಷ್ಟು ಭರ್ತಿಯಾಗಿದ್ದರೆ, 43 ಕೆರೆಗಳು ಶೇಕಡಾ 50ರಷ್ಟು ಭರ್ತಿಯಾಗಿವೆ. 6 ಕೆರೆಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ನೀರಿದ್ದು, 2 ಕೆರೆಗಳಲ್ಲಿ ಶೇಕಡಾ 1ರಿಂದ 25ರಷ್ಟು ಮಾತ್ರ ನೀರಿದೆ.

ನವೆಂಬರ್ 16ರಿಂದ ಮಲಪ್ರಭಾ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಿಗೆ 10 ದಿನಗಳ ಕಾಲ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಆದರೆ ಕಾಲುವೆ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕು, ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ಬಳಸಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ರೈತರು ಮಾತ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದೆ, ಹಿಂಗಾರು ಮಳೆಯೂ ಕೈಕೊಟ್ಟಿದೆ. ರೈತರು ಕಷ್ಟಪಟ್ಟು ಹಿಂಗಾರು ಬೆಳೆ ಬಿತ್ತನೆ ಮಾಡಿದ್ದಾರೆ, ಆದರೆ ಬೆಳೆ ಉಳಿಸಿಕೊಳ್ಳಲು ನೀರಿಲ್ಲದೆ ಪರದಾಡುವಂತಾಗಿದೆ. ಇತ್ತ ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿದೆ. ಕನಿಷ್ಠ ಐದು ದಿನವಾದರೂ ಕೃಷಿ ಭೂಮಿಗೆ ನೀರು ಹರಿಸಲು ಅವಕಾಶ ನೀಡಿದರೆ ಹಿಂಗಾರು ಬೆಳೆ ಉಳಿಸಿಕೊಳ್ಳಬಹುದು, ಜಾನುವಾರುಗಳಿಗೆ ಮೇವು ಬೆಳೆಸಲು ಅನುಕೂಲವಾಗಲಿದೆ. ರೈತರು ಬದುಕಬೇಕಾದರೆ ಕೃಷಿ ಭೂಮಿಗೂ ನೀರು ಹರಿಸಲು ಜಿಲ್ಲಾಡಳಿತ ಅವಕಾಶ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಒಂದೆಡೆ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ಜಿಲ್ಲಾಡಳಿತದ ಪ್ರಯತ್ನ, ಮತ್ತೊಂದೆಡೆ ಬೆಳೆ ಉಳಿಸಿಕೊಳ್ಳಲು ನೀರಿಗಾಗಿ ರೈತರ ಹೋರಾಟ. ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ನೀರು ಬಳಕೆ ಮಾಡಬೇಕೆಂಬ ಜಿಲ್ಲಾಡಳಿತದ ಆದೇಶದ ನಡುವೆ ರೈತರ ಕೃಷಿ ಭೂಮಿಗೂ ನೀರು ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಮಂಜುನಾಥ ಡಿ, ಇನ್ ನ್ಯೂಸ್, ಧಾರವಾಡ.

Tags:

error: Content is protected !!