Belagavi

ನಮ್ಮೂರಲ್ಲೇ ನಮ್ಮ ಪರ ನಿರ್ಣಯಕ್ಕೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ

Share

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಕನ್ನಡ ಹೋರಾಟಗಾರರಿಗೆ ಭರ್ಜರಿ ಸನ್ಮಾನ ನೆರವೇರಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಒಂದು ಕಾಲದಲ್ಲಿ ನಮ್ಮೂರಲ್ಲೇ ನಮ್ಮ ಪರವಾಗಿ ನಿರ್ಣಯ ಬರಬೇಕಾದರೆ ಹೋರಾಟ ಮಾಡಬೇಕಾದ ಸನ್ನಿವೇಶವಿತ್ತು ಎಂದು ಹಿಂದಿನ ಬೆಳವಣಿಗೆಗಳನ್ನು ಸ್ಮರಿಸಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶರದ್ ಪವಾರ್ ಅವರ ನಡೆಗಳ ನಡುವೆ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ಉಲ್ಲೇಖಿಸಿ, ಗಡಿ ಕನ್ನಡಿಗರ ಹೋರಾಟವನ್ನು ಶ್ಲಾಘಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ವತಿಯಿಂದ ಶಿವಬಸವ ನಗರದ ಎಸ್.ಜಿ.ಬಿ.ಐ.ಟಿ ಶಿವಕುಮಾರ ಸಂಬರಗಿಮಠ ಸಭಾಭವನದಲ್ಲಿ ಹೋರಾಟಗಾರರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ನೆಲ, ಜಲ, ಭಾಷೆಯ ವಿಚಾರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕದ ಪರವಾಗಿ ನಿರ್ಣಯ ಕೈಗೊಳ್ಳಲು ಆರು ತಿಂಗಳು ಹೋರಾಟ ನಡೆಸಬೇಕಾದ ಸನ್ನಿವೇಶ ನಿರ್ಮಾಣವಾಗಿದ್ದನ್ನು ಉಲ್ಲೇಖಿಸಿದರು. ಹಿಂದೆ ಬಾಳಾಸಾಹೇಬ್ ಠಾಕ್ರೆ, ಶರದ್ ಪವಾರ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಚೋದನೆಗಳ ನಡುವೆ, ಸರ್ಕಾರ ಮೌನವಾಗಿ ‘ಅಂಪೈರ್’ ರೀತಿ ಕುಳಿತಿದ್ದರೂ ಚಂದ್ರಗೌಡರು ಸೇರಿದಂತೆ ಇಲ್ಲಿನ ಹೋರಾಟಗಾರರು ಮುಂಚೂಣಿಯಲ್ಲಿ ನಿಂತು ಕನ್ನಡಿಗರನ್ನು ರಕ್ಷಿಸಿದ್ದಾರೆ ಎಂದು ಶ್ಲಾಘಿಸಿದರು.ಇದೇ ವೇಳೆ ಕನ್ನಡ ಭಾಷೆ ಮತ್ತು ಸರ್ಕಾರಿ ಕನ್ನಡ ಶಾಲೆಗಳ ಉಳಿವಿನ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ ಎಚ್.ಕೆ. ಪಾಟೀಲ, ಬಡವರ ಮಕ್ಕಳಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಖಾಸಗಿಯವರಿಗೆ ವಹಿಸಿಕೊಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಬೆಳಗಾವಿ, ಹುಬ್ಬಳ್ಳಿ, ಗದಗ, ವಿಜಯಪುರ, ಬಾಗಲಕೋಟೆ ಸೇರಿದಂತೆ ಕನ್ನಡದ ದನಿ ಮೊಳಗುವ ಕಡೆಗಳಲ್ಲೇ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಬಂದ್ ಮಾಡಬಾರದು ಎಂಬ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು, ಅದು ದೊಡ್ಡ ಮೈಲಿಗಲ್ಲಾಗುತ್ತದೆ ಎಂದು ಅವರು ಆಗ್ರಹಿಸಿದರು.

ಗಡಿ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಆತಂಕವಿಲ್ಲವಾದರೂ, ಜಲ, ಭಾಷೆ ಮತ್ತು ನದಿ ನೀರಿನ ವಿವಾದಗಳಲ್ಲಿ ನಮಗೆ ಗಂಭೀರ ಹಿನ್ನಡೆಯಾಗಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಕೃಷ್ಣಾ ನದಿ ವಿವಾದದಲ್ಲಿ ತೀರ್ಪು ಬಂದು, ನ್ಯಾಯಾಲಯದ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಇಂದಿಗೂ ಅಧಿಸೂಚನೆ ಹೊರಡಿಸಿಲ್ಲ ಹಾಗೂ ಕೇಂದ್ರದಿಂದ ಪರಿಸರ ಅನುಮತಿ ದೊರೆತಿಲ್ಲ ಎಂದರು. ಕೃಷ್ಣಾ, ತುಂಗಭದ್ರಾ ಮತ್ತು ಮಹದಾಯಿ ನದಿ ನೀರು ಉತ್ತರ ಕರ್ನಾಟಕದ ರೈತರ ಭೂಮಿಗೆ ಹರಿದರೆ ರೈತರ ಬದುಕಿನಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಹೇಳಿದರು.

ನಾಗನೂರು ಶ್ರೀ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ವಹಿಸಿದ್ದರು.

Tags:

error: Content is protected !!