Dharwad

ಅನುದಾನಿತ ಶಾಲಾ ಶಿಕ್ಷಕರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಸ್; ನ.26ರಂದು ಸಿಎಂ, ಶಿಕ್ಷಣ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ

Share

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ಅನುದಾನಿತ ಶಾಲಾ ಶಿಕ್ಷಕರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ನವೆಂಬರ್ 26ರಂದು ಹೋರಾಟಗಾರರ ಸಭೆ ಕರೆದಿರುವುದರಿಂದ, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿರುವುದಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನೂರಾರು ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಹೊರಟ್ಟಿ ಅವರು, “ನಿನ್ನೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಭೇಟಿಯಾಗಿದ್ದರು. ನವೆಂಬರ್ 26ರಂದು ಸಿಎಂ ಸಭೆ ಕರೆದಿದ್ದಾರೆ. ಶಿಕ್ಷಕರ ಯಾವ ಯಾವ ಬೇಡಿಕೆಗಳಿಗೆ ಸರ್ಕಾರ ಸಭೆಯಲ್ಲಿ ಸ್ಪಂದಿಸುತ್ತದೆ ನೋಡೋಣ, ಬಳಿಕ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ. ನವೆಂಬರ್ 26ರ ನಂತರ ನಾವು 27 ಮತ್ತು 28ರಂದು ಶಿಕ್ಷಕರ ಸಭೆ ಕರೆಯುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ 28ರಂದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಸಿಎಂ ಅವರ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುತ್ತದೆ. ಇಂದು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಎಲ್ಲಾ ಬೇಡಿಕೆಗಳು ಈಡೇರುವುದಿಲ್ಲ, ಸಮಾಧಾನವಾಗುವ ರೀತಿಯಲ್ಲಿ ಬೇಡಿಕೆಗಳು ಈಡೇರಿದರೆ ಸಾಕು. ಸಿಎಂ ಏನು ಭರವಸೆ ಕೊಡುತ್ತಾರೆ ನೋಡೋಣ. ನವೆಂಬರ್ 2ರಂದು ಅಧಿವೇಶನ ಆರಂಭವಾಗುತ್ತದೆ. ಎಲ್ಲಾ ಶಾಸಕರು ಸೇರಿ ಏನು ಮಾಡಬೇಕು ಎಂದು ಸಭೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. 26ರ ಸಭೆಯ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ” ಎಂದರು.

ಜೊತೆಗೆ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಪ್ರತಿಭಟನೆಯಲ್ಲಿ ಮಹಿಳೆಯರಿಗೆ ಮೂಲ ಸೌಲಭ್ಯಗಳ ಕೊರತೆ ಇದೆ. ಅವರು ಮತ್ತೆ ಹೋರಾಟವನ್ನು ಆರಂಭಿಸಿದ್ದಾರೆ. ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು” ಎಂದು ಒತ್ತಾಯಿಸಿದರು.

ಬೈಟ್: ಬಸವರಾಜ್ ಹೊರಟ್ಟಿ, ವಿಧಾನ ಪರಿಷತ್ ಮಾಜಿ ಸಭಾಪತಿ.

Tags:

error: Content is protected !!