“ಅರೆಹುಚ್ಚರ ಬಗ್ಗೆ ಚರ್ಚೆ ಮಾಡೋದು ಬೇಡ” ಹೀಗಂತ ಖಾರವಾಗಿ ಪ್ರತಿಕ್ರಿಯೆ ನೀಡಿರೋದು ಸಚಿವ ಲಕ್ಷ್ಮಣ ಸವದಿ. ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ವಿವಾದಿತ ಪುಸ್ತಕದ ಲೇಖಕ ರವಿ ಹಂಜ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, “ಅವನೊಬ್ಬ ಹುಚ್ಚ-ಇವನೊಬ್ಬ ಮುಠ್ಠಾಳ” ಎಂದು ಕಿಡಿಕಾರಿದ್ದಾರೆ.
ಅಥಣಿ ಜಿಲ್ಲೆ ಘೋಷಣೆ ವಿಚಾರದಲ್ಲಿ ಲಕ್ಷ್ಮಣ ಸವದಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆರೋಪಕ್ಕೆ ಅಥಣಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಲಕ್ಷ್ಮಣ ಸವದಿ, “ಹುಚ್ಚರ ಬಗ್ಗೆ ಮಾತನಾಡಬೇಡಿ ಎಂದು ಈಗಾಗಲೇ ಹೇಳಿದ್ದೇನೆ, ಮತ್ತೆ ಅದೇ ಹುಚ್ಚನ ಬಗ್ಗೆ ಕೇಳುತ್ತಿದ್ದೀರಲ್ಲ? ಅರೆಹುಚ್ಚರ ಬಗ್ಗೆ ಏನೂ ಕೇಳಬೇಡಿ, ಅಂತಹವರ ಬಗ್ಗೆ ಚರ್ಚೆ ಮಾಡಬಾರದು” ಎಂದು ತಿರುಗೇಟು ನೀಡಿದರು.
ಇದೇ ವೇಳೆ, ರವಿ ಹಂಜ್ ಅವರ ವಿವಾದಿತ ಪುಸ್ತಕದ ಹಿಂದೆ ಆರ್ಎಸ್ಎಸ್ ಕೈವಾಡವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಹಿಂದೆ ಯಾವ ಸಂಘಟನೆಯೂ ಇಲ್ಲ; ಬದಲಾಗಿ ಕೆಲವೇ ಗಂಟೆಗಳಲ್ಲಿ ಪ್ರಸಿದ್ಧಿ ಪಡೆಯಬೇಕೆಂಬ ಪ್ರಚಾರದ ಗೀಳಿನಿಂದ ಕೆಲವು ವಾಕ್ಯಗಳನ್ನು ತಿರುಚಿ ಬರೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಅವನೊಬ್ಬ ಹುಚ್ಚ-ಇವನೊಬ್ಬ ಮುಠ್ಠಾಳ” ಎಂದು ಕಿಡಿಕಾರಿದ ಸವದಿ, ಇಂತಹ ಮೂರ್ಖತನದ ಕೆಲಸ ಮಾಡಿದ ವ್ಯಕ್ತಿಯನ್ನು ‘ವಿಚಾರವಾದಿ’ ಮಟ್ಟಕ್ಕೆ ತಂದು ನಿಲ್ಲಿಸಬೇಡಿ, ಮೊದಲು ಇಂತಹ ಮುಠ್ಠಾಳರ ಬಗ್ಗೆ ಚರ್ಚೆ ನಿಲ್ಲಿಸಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.ವಿವಾದಿತ ಪುಸ್ತಕವನ್ನು ಸರ್ಕಾರ ಹೇಗೆ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಪ್ರಶ್ನಿಸಿ ಕಾನೂನು ಹೋರಾಟದ ಸವಾಲು ಹಾಕಿರುವ ಲೇಖಕ ರವಿ ಹಂಜ್ ಅವರಿಗೆ ಸಚಿವ ಸವದಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಈಗಾಗಲೇ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಿದೆ; ಅವರು ಸುಪ್ರೀಂ ಕೋರ್ಟ್ ತನಕ ಹೋದರೂ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಸವದಿ ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ, ಕಳೆದ ಏಳು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸಿದ ಅವರು, ಮುಖ್ಯಮಂತ್ರಿಗಳು ಈಗಾಗಲೇ ವಿನಂತಿ ಮಾಡಿಕೊಂಡಿದ್ದು, ಮುಂಬರುವ ಅಧಿವೇಶನದ ಸಂದರ್ಭದಲ್ಲಿ ಖಂಡಿತವಾಗಿಯೂ ಪರಿಹಾರ ಒದಗಿಸಲಾಗುವುದು; ಆದ್ದರಿಂದ ಆಶಾ ಸೋದರಿಯರು ತಾಳ್ಮೆಯಿಂದಿದ್ದು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಲಕ್ಷ್ಮಣ ಸವದಿ ಭರವಸೆ ನೀಡಿದರು.
