Athani

ಭಿಕ್ಷಾಟನೆ ಹೆಸರಲ್ಲಿ ಬಾಲ್ಯದ ಬಲಿ!

Share

ಒಂದು ಕೈಯಲ್ಲಿ ಹಸುಗೂಸು, ಮತ್ತೊಂದು ಕೈಯಲ್ಲಿ ಭಿಕ್ಷೆಗಾಗಿ ಚಾಚಿದ ಅಂಗೈ… ಆಟವಾಡುತ್ತಾ, ಅಕ್ಷರ ಕಲಿಯುತ್ತಾ, ಶಾಲೆಯ ಅಂಗಳದಲ್ಲಿ ನಲಿದಾಡಬೇಕಿದ್ದ ಪುಟ್ಟ ಮಕ್ಕಳು ಇಂದು ಬೀದಿ ಬೀದಿಗಳಲ್ಲಿ ತುತ್ತು ಅನ್ನಕ್ಕಾಗಿ ಕೈಚಾಚುವ ದುಸ್ಥಿತಿ. ಇದು ಯಾವುದೋ ದೂರದ ಊರಿನ ಕಥೆಯಲ್ಲ; ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಣ್ಣೆದುರಿನ ಕರುಣಾಜನಕ ವಾಸ್ತವ!

ಮಕ್ಕಳ ಕೈಯಲ್ಲಿ ಪುಸ್ತಕ, ಬೆನ್ನಿನ ಮೇಲೆ ಶಾಲಾ ಬ್ಯಾಗ್ ಇರಬೇಕಾದ ವಯಸ್ಸಿನಲ್ಲಿ ಭಿಕ್ಷಾಪಾತ್ರೆ ಕಾಣಿಸುತ್ತಿದೆ. ಕಂಕುಳಲ್ಲಿ ಹಸುಗೂಸುಗಳನ್ನು ಹೊತ್ತುಕೊಂಡು, ಬಿಸಿಲು-ಮಳೆ ಎನ್ನದೆ ಜನರ ಮುಂದೆ ಅಂಗಲಾಚುವ ದೃಶ್ಯಗಳು ಮನಕಲಕುವಂತಿವೆ. ಈ ಪುಟ್ಟ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಭಿಕ್ಷಾಟನೆಗೆ ಬಳಸಲಾಗುತ್ತಿದೆಯೇ? ಅವರ ಬಾಲ್ಯವನ್ನೇ ಹಣ ಸಂಪಾದನೆಯ ಸಾಧನವನ್ನಾಗಿ ಮಾಡಲಾಗುತ್ತಿದೆಯೇ? ಎಂಬ ಗಂಭೀರ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಅದರಲ್ಲೂ ಅಥಣಿ ಪೊಲೀಸ್ ಠಾಣೆಯ ಎದುರಿನಲ್ಲೇ ಇಂತಹ ದೃಶ್ಯಗಳು ಕಂಡುಬರುತ್ತಿರುವುದು ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮಕ್ಕಳ ಹಕ್ಕುಗಳ ರಕ್ಷಣೆ, ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಸುರಕ್ಷತೆಗೆ ವಿಶೇಷ ಕಾಯ್ದೆಗಳೂ ಇವೆ. ಆದರೆ, ಇವೆಲ್ಲವೂ ಕಾಗದದ ಮೇಲಷ್ಟೇ ಉಳಿದಿವೆಯೇ ಎಂಬ ಅನುಮಾನ ಮೂಡುತ್ತಿದೆ. ಪಟ್ಟಣದ ಪ್ರಮುಖ ವೃತ್ತಗಳು, ಬಸ್ ನಿಲ್ದಾಣ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪುಟ್ಟ ಮಕ್ಕಳು ಭಿಕ್ಷೆ ಬೇಡುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಬಾರದಿರುವುದು ದುರಂತ. ಇದು ಕೇವಲ ಬಡತನದ ಸಮಸ್ಯೆಯಲ್ಲ; ಮಕ್ಕಳ ಹಕ್ಕುಗಳು ಮತ್ತು ಅವರ ಭವಿಷ್ಯದ ಪ್ರಶ್ನೆಯಾಗಿದೆ.

ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುವವರ ಹಿಂದೆ ಯಾರಿದ್ದಾರೆ? ಅವರನ್ನು ಬಳಸಿಕೊಂಡು ಹಣ ಸಂಪಾದಿಸುವ ಜಾಲವಿದೆಯೇ? ಅವರ ಕುಟುಂಬದ ಪರಿಸ್ಥಿತಿ ಏನು? ಎಂಬುದರ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪರಿಶೀಲನೆ ನಡೆಸಬೇಕಿದೆ. ಮಕ್ಕಳನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸಿ, ಅವರಿಗೆ ಶಿಕ್ಷಣ, ರಕ್ಷಣೆ ಮತ್ತು ಸುರಕ್ಷಿತ ಬದುಕು ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಿದೆ.

ಒಂದು ಮಗುವಿನ ಕೈಗೆ ಭಿಕ್ಷಾಪಾತ್ರೆ ಕೊಡುವುದು ಅದರ ಇಂದಿನ ಹಸಿವಿನ ಸಂಕೇತ ಮಾತ್ರವಲ್ಲ; ಅದರ ನಾಳಿನ ಭವಿಷ್ಯವನ್ನೇ ಕಸಿದುಕೊಳ್ಳುವ ಕ್ರೌರ್ಯವೂ ಹೌದು. ಮಕ್ಕಳನ್ನು ಕಂಡಾಗ ಒಂದೆರಡು ರೂಪಾಯಿ ನೀಡಿ ಮುಂದೆ ಸಾಗುವ ಸಮಾಜವೂ ಒಮ್ಮೆ ಯೋಚಿಸಬೇಕಿದೆ. ಭಿಕ್ಷೆ ನೀಡುವುದಕ್ಕಿಂತ ಆ ಮಕ್ಕಳಿಗೆ ಶಿಕ್ಷಣ, ರಕ್ಷಣೆ ಮತ್ತು ಗೌರವಯುತ ಬದುಕು ಸಿಗುವಂತೆ ಮಾಡುವುದು ಮುಖ್ಯ.

ಅಧಿಕಾರಿಗಳೇ, ಇನ್ನೆಷ್ಟು ದಿನ ಈ ನಿರ್ಲಕ್ಷ್ಯ?

ಮಕ್ಕಳ ಬಾಲ್ಯ ಬೀದಿಪಾಲಾಗುತ್ತಿರುವಾಗ ನಿಮ್ಮ ಯೋಜನೆಗಳು ಯಾರಿಗಾಗಿ? ಅಥಣಿಯ ಬೀದಿಗಳಲ್ಲಿ ಭಿಕ್ಷೆ ಬೇಡುವ ಪುಟಾಣಿಗಳ ಕೈಗೆ ಭಿಕ್ಷಾಪಾತ್ರೆಯ ಬದಲು ಪುಸ್ತಕ ಕೊಡುವ ದಿನ ಯಾವಾಗ?

ಮಕ್ಕಳ ಬಾಲ್ಯ ಭಿಕ್ಷಾಟನೆಗೆ ಬಲಿಯಾಗದಿರಲಿ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತಷ್ಟು ಪುಟಾಣಿಗಳ ಭವಿಷ್ಯ ಕತ್ತಲಾಗದಿರಲಿ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮಕ್ಕಳ ರಕ್ಷಣೆಗೆ ಮುಂದಾಗಲಿ.

ಸಿದ್ದಾರೂಢ ಬಣ್ಣದ್
ಇನ್ ನ್ಯೂಸ್, ಅಥಣಿ

Tags:

error: Content is protected !!