ಬೆಳಗಾವಿ ಅಧಿವೇಶನದ ಹೊಸ್ತಿಲಲ್ಲೇ ರಾಜ್ಯ ರಾಜಕಾರಣದಲ್ಲಿ ಮತ್ತೆ ಜಿಲ್ಲಾ ವಿಭಜನೆಯ ಕಿಚ್ಚು ಹೊತ್ತಿಕೊಂಡಿದೆ. ಬೃಹತ್ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಅಧಿವೇಶನದ ಬಳಿಕ ಅಥಣಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡೋಣ ಎನ್ನುವ ಮೂಲಕ ಮಾಜಿ ಡಿಸಿಎಂ ಹಾಗೂ ಹಾಲಿ ಸಹಕಾರ ಸಚಿವ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬರೋಬ್ಬರಿ 15 ತಾಲೂಕುಗಳು ಮತ್ತು 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿಯ ವಿಭಜನೆಯ ಕೂಗು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಥಣಿಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಅಧಿವೇಶನ ಮುಗಿದ ಬಳಿಕ ಅಥಣಿಯನ್ನು ನೂತನ ಜಿಲ್ಲೆಯನ್ನಾಗಿ ಮಾಡೋಣ ಎಂದಿದ್ದಾರೆ. ಈಗಾಗಲೇ ಅಥಣಿಗೆ ಆರ್ಟಿಒ ಕಚೇರಿ ತರಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ವಿಂಗಡಣೆಯಾದರೆ ಹೊಸ ಜಿಲ್ಲೆಯ ಜೊತೆಗೆ ಪ್ರತ್ಯೇಕ ಮಧ್ಯವರ್ತಿ ಬ್ಯಾಂಕ್ ಅನ್ನೂ ಸ್ಥಾಪಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. 25 ವರ್ಷಗಳ ನಂತರವಾದರೂ ಸರ್ಕಾರ ದೊಡ್ಡ ಮನಸ್ಸು ಮಾಡಿ ಜಿಲ್ಲಾ ವಿಭಜನೆಯ ನಿರ್ಧಾರ ಕೈಗೊಳ್ಳಬೇಕು ಎಂದು ಸವದಿ ಒತ್ತಾಯಿಸಿದ್ದಾರೆ.
ಇನ್ನು ಹೊಸ ಜಿಲ್ಲೆ ರಚನೆಯ ಲೆಕ್ಕಾಚಾರ ಬಿಚ್ಚಿಟ್ಟಿರುವ ಸವದಿ, ಈಗಾಗಲೇ ಅಥಣಿ, ಕಾಗವಾಡ, ರಾಯಬಾಗ ಮತ್ತು ಕುಡಚಿ ಕ್ಷೇತ್ರದವರು ಒಂದಾಗಿದ್ದು, ಇನ್ನೆರಡು ಕ್ಷೇತ್ರಗಳನ್ನು ಸೇರಿಸಿಕೊಂಡು ನೂತನ ಜಿಲ್ಲೆ ರಚಿಸೋಣ ಎಂದಿದ್ದಾರೆ. ಆದರೆ, ಈ ಹಿಂದೆ ಚಿಕ್ಕೋಡಿ, ಗೋಕಾಕ್ ಹಾಗೂ ಬೈಲಹೊಂಗಲ ತಾಲೂಕಿನವರು ಕೂಡ ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಇಟ್ಟಿರುವುದೇ ಸದ್ಯದ ಗೊಂದಲಕ್ಕೆ ಕಾರಣವಾಗಿದೆ. ಮೂರು ಕಡೆಯಿಂದಲೂ ಬೇಡಿಕೆ ಇರುವುದರಿಂದ ಜಿಲ್ಲಾ ವಿಭಜನೆ ವಿಚಾರ ‘ಆರಕ್ಕೆ ಏರುತ್ತಿಲ್ಲ, ಮೂರಕ್ಕೆ ಇಳಿಯುತ್ತಿಲ್ಲ’ ಎಂಬಂತಾಗಿದೆ ಎಂದು ಸವದಿ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಒಟ್ಟಿನಲ್ಲಿ ಅಧಿವೇಶನಕ್ಕೂ ಮುನ್ನವೇ ಸವದಿ ನೀಡಿರುವ ಈ ಹೇಳಿಕೆ ಕುಂದಾನಗರಿ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
