ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವರ್ಗಾವಣೆಗೆ ನಿರ್ದಿಷ್ಟ ನಿಯಮಾವಳಿಗಳಿದ್ದರೂ, ಕೆಲವರು ಒಂದೇ ತಾಲೂಕಿನಲ್ಲಿ ದಶಕಗಳ ಕಾಲ ಸೇವೆ ಮುಂದುವರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಆರಂಭಿಸಿ, ಪ್ರಸ್ತುತ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ಹುದ್ದೆಯವರೆಗೆ ಸುಮಾರು 26ರಿಂದ 27 ವರ್ಷಗಳ ಕಾಲ ಅಥಣಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ವಿಚಾರ ಇದೀಗ ಸಾರ್ವಜನಿಕರ ಗಮನ ಸೆಳೆದಿದೆ.
ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಆರಂಭಿಸಿದ ಅಪ್ಪಸಾಬ ಪಾಂಡ್ರೆ ಅವರು, ತಮ್ಮ ಸುದೀರ್ಘ ಸೇವಾವಧಿಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕುಗಳಲ್ಲಿ ಅಲ್ಪಾವಧಿಗೆ ಕಾರ್ಯನಿರ್ವಹಿಸಿದ್ದು, ಬಳಿಕ ಮತ್ತೆ ಅಥಣಿ ತಾಲೂಕಿಗೆ ಮರಳಿ ವಿವಿಧ ಹುದ್ದೆಗಳಲ್ಲಿ ಸೇವೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಅಥಣಿಯಲ್ಲಿ ಎಫ್‌ಡಿಸಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಹುದ್ದೆಯಿಂದ ಆರಂಭಿಸಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾ, ಇಷ್ಟು ದೀರ್ಘಕಾಲ ಒಂದೇ ತಾಲೂಕಿನಲ್ಲಿ ಸೇವೆ ಮುಂದುವರಿಸಿರುವುದು ಹಲವು ಅನುಮಾನ ಹಾಗೂ ಪ್ರಶ್ನೆಗಳಿಗೆ ಕಾರಣವಾಗಿದೆ.
ವರ್ಗಾವಣೆ ನಿಯಮಗಳು ಸಾಮಾನ್ಯ ಸಿಬ್ಬಂದಿಗೆ ಮಾತ್ರವೇ?
ಸರ್ಕಾರಿ ವರ್ಗಾವಣೆ ನಿಯಮಾವಳಿಗಳ ಪ್ರಕಾರ ಒಂದೇ ತಾಲೂಕಿನಲ್ಲಿ ಇಷ್ಟು ದೀರ್ಘಕಾಲ ಸೇವೆ ಸಲ್ಲಿಸಲು ಅವಕಾಶ ಹೇಗೆ ದೊರೆಯಿತು? ಈ ಅವಧಿಯಲ್ಲಿ ಜಾರಿಯಲ್ಲಿದ್ದ ವರ್ಗಾವಣೆ ನಿಯಮಗಳು ಇವರಿಗೆ ಅನ್ವಯವಾಗಿಲ್ಲವೇ? ಒಂದು ವೇಳೆ ವಿಶೇಷ ವಿನಾಯಿತಿ ನೀಡಲಾಗಿದ್ದರೆ, ಅದಕ್ಕೆ ಕಾರಣಗಳೇನು? ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ಬಂದಿಲ್ಲವೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಯ ಸೇವಾವಧಿ, ವರ್ಗಾವಣೆ ದಾಖಲೆಗಳು ಹಾಗೂ ನಿಯಮಾನುಸಾರ ನೀಡಲಾಗಿರುವ ವಿನಾಯಿತಿಗಳ ಕುರಿತು ಪರಿಶೀಲನೆ ನಡೆಸುತ್ತಾರೆಯೇ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ಒಟ್ಟಾರೆ, ಜಿಲ್ಲಾಡಳಿತ ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ, ವಾಸ್ತವಾಂಶಗಳನ್ನು ಬಹಿರಂಗಪಡಿಸುವುದರ ಜೊತೆಗೆ ವರ್ಗಾವಣೆ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
*ಸಿದ್ದಾರೂಢ ಬಣ್ಣದ ಇನ್ ನ್ಯೂಸ್ ಅಥಣಿ
