Kagawad

ಕಾಗವಾಡ ತಾಲೂಕಿನಲ್ಲಿ ಕಬ್ಬು ಬೆಳೆಗಾರ ರೈತರ ಉಗ್ರ ಹೋರಾಟ: ರಾಜ್ಯ ಹೆದ್ದಾರಿಗಳು ಬಂದ್‌, ಸಂಚಾರ ಸಂಪೂರ್ಣ ಕಡಿತ

Share

ಕಾಗವಾಡ ತಾಲೂಕಿನಲ್ಲಿ ಕಾಗವಾಡ – ಜಮಖಂಡಿ, ಕಾಗವಾಡ – ಬೆಳಗಾವಿ ಹಾಗೂ ಕಾಗವಾಡ – ವಿಜಯಪುರ ರಾಜ್ಯ ಹೆದ್ದಾರಿಗಳನ್ನು ರೈತ ಹೋರಾಟಗಾರರು ತಡೆಹಿಡಿದು ತಮ್ಮ ತೀವ್ರ ಆಕ್ರೋಶ ಹೊರಹಾಕಿದರು.

ಕರ್ನಾಟಕ ಬಂದ್ ಕರೆಯಂತೆ ಕಾಗವಾಡದ ರಾಣಿ ಚೆನ್ನಮ್ಮ ವೃತ್ತ ಮತ್ತು ಕಾಗವಾಡ – ವಿಜಯಪುರ ಮಾರ್ಗದ ಶೇಡಬಾಳ ರೈಲು ನಿಲ್ದಾಣದ ಬ್ರಿಡ್ಜ್ ಮುಖ್ಯ ಮಾರ್ಗವನ್ನು ತಡೆದು ಸಂಚಾರ ಸೇವೆಯನ್ನು ಕಡಿತಗೊಳಿಸಲಾಗಿದೆ.
ಅಂತೆಯೇ, ಕಾಗವಾಡ – ಜಮಖಂಡಿ ಮಾರ್ಗದ ಶೇಡಬಾಳ, ಉಗಾರ ಬಿ.ಕೆ., ಉಗಾರ್ ಖುರ್ದ್ ಹಾಗೂ ಐನಾಪುರ ಗ್ರಾಮಗಳ ಮುಖ್ಯ ದ್ವಾರಗಳಲ್ಲಿ ರಸ್ತೆ ತಡೆ ನಡೆಸಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ.

ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಅವರು ರೈತರ ಪರವಾಗಿ ಮಂಡಿಸಿರುವ ಬೇಡಿಕೆಗಳನ್ನು ಈಡೇರಿಸುವವರೆಗೆ ಈ ರಸ್ತೆ ತಡೆ ಹೋರಾಟ ಹೀಗೆಯೇ ಮುಂದುವರೆಯಲಿದೆ ಎಂದು ರೈತ ಹೋರಾಟಗಾರರು ಘೋಷಿಸಿದರು.
ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಕರ್ನಾಟಕ ಬಂದ್ ಬಗ್ಗೆ ಪ್ರತಿಕ್ರಿಯಿಸಿ, “ರೈತರ ಬೇಡಿಕೆ ಅತ್ಯಂತ ಸಮರ್ಪಕವಾಗಿದೆ. ಕಬ್ಬು ಬೆಳೆ ಬೆಳೆಯುವ ರೈತ ಇಂದು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾನೆ. ನಾನೊಬ್ಬ ರೈತನಾಗಿ ಹೇಳುತ್ತಿದ್ದೇನೆ; ಬೆಳಿಗ್ಗೆಯಿಂದ ಆಗುವ ವೆಚ್ಚ, ನೀಡುತ್ತಿರುವ ಕೂಲಿ ಹಾಗೂ ಬರುತ್ತಿರುವ ಆದಾಯವನ್ನು ಹೋಲಿಸಿದರೆ ಕಬ್ಬು ಬೆಳೆ ಸಂಪೂರ್ಣ ನಷ್ಟದಲ್ಲಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಸಕ್ಕರೆ ದರ ಹೆಚ್ಚಿಸಬೇಕು ಮತ್ತು ರಾಜ್ಯ ಸರ್ಕಾರವೂ ಸಹಕರಿಸಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ನನ್ನ ಕಾಲಿಗೆ ನೋವಾಗದಿದ್ದರೆ ಈ ಹೋರಾಟದ ಮುಂಚೂಣಿಯಲ್ಲಿ ನಾನೇ ಇರುತ್ತಿದ್ದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಶಾಸಕರು ಹಾಗೂ ಕಬ್ಬು ಹೋರಾಟಗಾರ ಸಮಿತಿಯ ಅಧ್ಯಕ್ಷರಾದ ಮೋಹನರಾವ್ ಶಹಾ ಅವರು ಉಗಾರದಲ್ಲಿ ಮಾತನಾಡಿ, “ನನಗೆ ಈಗ 83 ವರ್ಷ ವಯಸ್ಸು. ನಾನು ಹೋರಾಟಗಾರನಾಗಿದ್ದಾಗ ನಮ್ಮ ಹೋರಾಟ ಕೇವಲ ಉಗಾರ ಸಕ್ಕರೆ ಕಾರ್ಖಾನೆಗೆ ಮಾತ್ರ ಸೀಮಿತವಾಗಿತ್ತು. ನಮ್ಮ ನಂತರ ಹೋರಾಟಗಾರರು ಇರುತ್ತಾರೋ ಇಲ್ಲವೋ ಎಂಬ ಚಿಂತೆ ನನ್ನಲ್ಲಿತ್ತು. ಆದರೆ ಶಶಿಕಾಂತ್ ಗುರೂಜಿ ಮತ್ತು ಚಿನ್ನಪ್ಪ ಪೂಜಾರಿ ಇಬ್ಬರೂ ಮುಂದಾಳತ್ವ ವಹಿಸಿ ಲಕ್ಷಾಂತರ ರೈತರನ್ನು ಒಂದುಗೂಡಿಸಿ ಸರ್ಕಾರಕ್ಕೆ ಸವಾಲು ಹಾಕುತ್ತಿರುವುದನ್ನು ಕಂಡು ನನ್ನ ಮನಸ್ಸಿಗೆ ತೃಪ್ತಿಯಾಗಿದೆ. ಸರ್ಕಾರ ರೈತರ ತಾಳ್ಮೆ ಪರೀಕ್ಷಿಸದೆ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿಕೊಂಡರು.

ರೈತ ಹೋರಾಟಗಾರ ಪದ್ಮಕುಮಾರ್ ಆಳಪ್ನವರ್ ಮಾತನಾಡಿ, “ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ತಾಳ್ಮೆಯನ್ನು ಪರೀಕ್ಷಿಸಬಾರದು. ತಕ್ಷಣವೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ತಡವಾದಷ್ಟು ಸರ್ಕಾರಕ್ಕೇ ತೊಂದರೆಯಾಗಲಿದೆ” ಎಂದು ಎಚ್ಚರಿಸಿದರು.

ಉಗಾರದ ಯುವ ರೈತರಾದ ರಾಹುಲ್ ಶಹಾ, ವಿಪುಲ್ ಪಾಟೀಲ್, ವೃಷಭ ಪಾಟೀಲ್, ವಸಂತ್ ಖೊತ, ಅಭಿಷೇಕ್ ಚೌಗುಲೆ, ಪಂಕಜ್ ಕುಸನಾಳಿ, ರಾಜು ದಾನೋಳಿ, ವಿನಾಯಕ ಕಾಂಬಳೆ, ರಾಕೇಶ್ ಪಾಟೀಲ್, ಪ್ರಫುಲ್ ಥೊರುಷೆ; ಶೇಡಬಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ್, ನೇಮಿನಾಥ್ ನರಸಗೌಡರ, ಅರವಿಂದ್ ಬರಗಾಲೆ, ಪ್ರಕಾಶ್ ಚೌಗುಲೆ; ಶೇಡಬಾಳ ಸ್ಟೇಷನ್‌ನಲ್ಲಿ ಶೀತಲ ಹಿರಲೆಕರ್, ಸಂದೀಪ್ ಸಾಂಳುಖೆ, ಪ್ರವೀಣ ಪಾಟೀಲ್; ಕಾಗವಾಡದಲ್ಲಿ ಹಿರಿಯ ರೈತರಾದ ಎಂ.ಬಿ. ಉದಗಾವೆ, ನ್ಯಾಯವಾದಿ ಕಾಕಾ ಪಾಟೀಲ್, ಅಜಿತ್ ಕರವ, ಕರವೇ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯುವಕರು ಈ ಬೃಹತ್ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಸುಕುಮಾರ್ ಬನ್ನುರೆ
ಇನ್ ನ್ಯೂಸ್, ಕಾಗವಾಡ

Tags:

error: Content is protected !!