ಕಾಗವಾಡ ಮತಕ್ಷೇತ್ರದ ಅನಂತಪುರ ಗ್ರಾಮದ ಕೆಲವರು ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಇಲ್ಲಿಯ ಜನರಿಗೆ ನೀರು ಪೂರೈಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಕಾರಣದಿಂದ ಎಲ್ಲ ತಾಲೂಕು ಅಧಿಕಾರಿಗಳು ಟ್ಯಾಂಕರ್ ಹಾಗೂ ಇನ್ನಿತರ ಮುಖಾಂತರ ನೀರು ಪೂರೈಸಬೇಕೆಂದು ಅಧಿಕಾರಿಗಳ ಸಭೆಯಲ್ಲಿ ಶಾಸಕ ರಾಜು ಕಾಗೆ ಆದೇಶ ನೀಡಿದರು.
ಶನಿವಾರದಂದು ಉಗಾರದ ಶಾಸಕರ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿತ್ತು. ಅನಂತಪುರ ಭಾಗದ ಕಾರ್ಯಕರ್ತರು ಆಗಮಿಸಿ ಇಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದಾಗ, ಕೂಡಲೇ ಅಧಿಕಾರಿಗಳಿಗೆ ಅವರು ಸೂಚನೆಗಳನ್ನು ನೀಡಿದರು.
“ಕುಡಿಯುವ ನೀರಿಗಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರು, ‘ನನ್ನ ಕಡೆಯಿಂದ ಒಂದು ಕೋಟಿ ರೂಪಾಯಿ ಹಣ ನೀಡುತ್ತೇನೆ, ಸರ್ಕಾರ ಹಣ ಪಾವತಿಸಿ ಕೋವಿನ ಆಣೆಕಟ್ಟೆಯಿಂದ ನೀರು ತೆಗೆದುಕೊಂಡು ಬನ್ನಿ’ ಎಂದು ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಕೃಷ್ಣಾ ನದಿಯಲ್ಲಿ ನೀರು ಕುಡಿಯುವುದಕ್ಕಾಗಿ ಉಳಿಸಲಾಗಿದೆ. ಈ ನೀರನ್ನು ಕೆನಾಲ್ ಮುಖಾಂತರ ಹರಿಸಲು ಸಾಧ್ಯವಿಲ್ಲ. ಇದು ಗೊತ್ತಿದ್ದರೂ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಒಂದು ಕೋಟಿ ರೂಪಾಯಿ ಹಣ ನೀಡುವ ಹೇಳಿಕೆಯನ್ನು ಮಾಜಿ ಸಚಿವ ಶ್ರೀಮಂತ ಪಾಟೀಲರು ನೀಡಿದ್ದಾರೆ. ಇದರ ಅರ್ಥ ಇಷ್ಟೇ; ‘ನೆರೆಮನೆಗೆ ಬೆಂಕಿ ಬಿದ್ದಾಗ ತಾನು ತೆನೆ ಸುಟ್ಟುಕೊಂಡಂತೆ’. ಇಂತಹ ಹೇಳಿಕೆಗಳು ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಬರುವ ಜೂನ್ ತಿಂಗಳಿನಲ್ಲಿ ಅನಂತಪುರ ಭಾಗದಲ್ಲಿ 11 ಕೆರೆಗಳು ಹಾಗೂ ಮಂಗಸುಳಿ ಭಾಗದಲ್ಲಿ 6 ಕೆರೆಗಳನ್ನು ನೀರು ತುಂಬಿಸುವ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.
“ಅನಂತಪುರ ಗ್ರಾಮದ ಜನರು ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು. ನಿಮಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಾಲಕಾಲಕ್ಕೆ ಮಾಡುತ್ತೇವೆ. ಅಲ್ಲದೆ ನೀರಿನ ಅಭಾವ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ” ಎಂದು ಸ್ಪಷ್ಟಪಡಿಸಿದರು.
ಅನಂತಪುರ ಭಾಗದಿಂದ ಆಗಮಿಸಿದ ರೈತರು ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ನೀಡುವಾಗ ಕೆಲವರು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಈ ವೇಳೆ ರೈತ ಮುಖಂಡರಾದ ಓಂಪ್ರಕಾಶ್ ಡೊಳ್ಳಿ, ರಾಜು ಸಾಲಿಮಠ, ಸಂಗಪ್ಪ ಜಾಬಗೌಡರ, ರಾಜು ಮಾಧಭಾವಿ, ಶಿವಾನಂದ ಪಾಟೀಲ್, ಶಿವಾನಂದ್ ಕೋತ್, ಬಹುಸಾಹೇಬ್ ಖೋತ್, ಮಂಜು ಕೂತ್ಲಾಂಡೆ, ಅಶೋಕ್ ಜಾಬಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುಕುಮಾರ್ ಬನ್ನೂರೆ
ಇನ್ ನ್ಯೂಸ್, ಕಾಗವಾಡ
