ಕಾಗವಾಡ ತಾಲೂಕಿನ ಉಗಾರ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ 85ನೇ ಕಬ್ಬು ನುರಿಸುವ ಹಂಗಾಮಿನ ಅಂಗವಾಗಿ ದಸರಾ ಹಬ್ಬದ ಶುಭ ಮುಹೂರ್ತದಲ್ಲಿ ಕ್ಯಾರಿಯರ್ ಪೂಜಾ ಕಾರ್ಯಕ್ರಮ ನೆರವೇರಿತು. ಕಾರ್ಖಾನೆಯ ಹಿರಿಯ ಉದ್ಯಮಿಗಳು ಹಾಗೂ ರೈತರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ನೂತನ ಹಂಗಾಮಿಗೆ ಚಾಲನೆ ನೀಡಲಾಯಿತು.

ಕಾಗವಾಡ ತಾಲೂಕಿನ ಉಗಾರದ ದಿ. ಉಗಾರ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ 85ನೇ ಕಬ್ಬು ನುರಿಸುವ ಹಂಗಾಮಿನ ಅಂಗವಾಗಿ ದಸರಾ ಹಬ್ಬದ ಶುಭ ಮುಹೂರ್ತದಲ್ಲಿ ಕಾರ್ಖಾನೆಯ ಕ್ಯಾರಿಯರ್ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಮಂಗಳವಾರ ಬೆಳಿಗ್ಗೆ ಸಕ್ಕರೆ ಕಾರ್ಖಾನೆಯ ಹಿರಿಯ ಉದ್ಯಮಿ ಪ್ರಫುಲ್ ಶಿರಗಾಂವ್ಕರ್, ವ್ಯವಸ್ಥಾಪಕ ನಿರ್ದೇಶಕ ಚಂದನ್ ಶಿರಗಾಂವ್ಕರ್, ಸುಹಾನ ಶಿರಗಾಂವ್ಕರ್ ಹಾಗೂ ಸಚಿನ್ ಶಿರಗಾಂವ್ಕರ್ ಅವರ ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ, ಹಂಗಾಮಿಗೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ್ ಶಿರಗಾಂವ್ಕರ್, ಈ ಸಾಲಿನ ಹಂಗಾಮಿನಲ್ಲಿ ೨೦ ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಕಬ್ಬಿನ ದರದ ಕುರಿತು ಮಾತನಾಡಿ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ ೨೬ರಂದು ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಕೈಗೊಳ್ಳುವ ನಿರ್ಣಯದಂತೆ ಕಬ್ಬಿನ ದರ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ದೀಪಚಂದ್ ಶಾ, ಶಿವಗೌಡ ಕಾಗೆ, ಕುಮಾರಿ ಸ್ವರಾ ಶಿರಗಾಂವ್ಕರ್, ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೋಡೆ, ಪ್ರಗತಿಪರ ರೈತರಾದ ರಾಮಚಂದ್ರ ಥೊರುಶೆ, ಮಹದೇವ ಕಟಗೇರಿ, ಅರುಣ್ ಗಾಣಿಗೇರ, ಸುಕುಮಾರ್ ಶೆಟ್ಟಿ, ಭೀಮು ಕೋಣೆ, ದಾದಾ ಪಾಟೀಲ, ಗಜಾನನ ಯರಂಡೋಲೆ, ಶಿವಾನಂದ ಹೊಸಮನಿ, ಸುನಿಲ್ ಪಾಟೀಲ ಸೇರಿದಂತೆ ಅನೇಕ ಪ್ರಗತಿಪರ ರೈತರು ಹಾಗೂ ಉಗಾರ ಪುರಸಭೆಯ ಸದಸ್ಯರು ಭಾಗವಹಿಸಿದ್ದರು. ಸಕ್ಕರೆ ಕಾರ್ಖಾನೆಯ ವಿವಿಧ ಇಲಾಖೆಗಳ ಅಧಿಕಾರಿಗಳು ರೈತರನ್ನು ಸ್ವಾಗತಿಸಿದರು.
