ದೇಶದಲ್ಲಿ ಹಿಂದೂ-ಮುಸ್ಲಿಂ ಸಮಾಜದ ಬಾಂಧವರಲ್ಲಿ ಬೇರೆ ಬೇರೆ ವಿಷಯಗಳ ಮೇಲೆ ಭಿನ್ನಾಭಿಪ್ರಾಯಗಳಿದ್ದರೂ, ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಹಿಂದೂ-ಮುಸ್ಲಿಂ ಬಾಂಧವರು ಒಂದುಗೂಡಿ ಗುಡ್ಡದಮಡ್ಡಿಯಲ್ಲಿರುವ ಓಂ ಶ್ರೀ ದುರ್ಗಾಪರಮೇಶ್ವರಿ ದೇವಿಯ ನವರಾತ್ರಿ ಹಬ್ಬವನ್ನು ಆಚರಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.

ಸೋಮವಾರದಂದು ದುರ್ಗಾಪರಮೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ಆರತಿ ಹಾಗೂ ಮಹಾಪೂಜೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಆಗಮಿಸಿದ ಸಾವಿರಾರು ಮಹಿಳಾ ಭಕ್ತರಿಗೆ ಹಾಗೂ ಬಾಲಕಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು.

ಓಂ ಶ್ರೀ ಶಕ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜೈಪಾಲ್ ಕೊಕಟ್ನೂರ್, ಅಣ್ಣಪ್ಪಾ ಖಟಾವೆ, ಸದಾಶಿವ್ ಮಡಿವಾಳ, ಸುರೇಶ್ ಕಾಗಲಿ, ಸುಮಿತ್ ದೊಂಗರೆ ಹಾಗೂ ಮುಸ್ಲಿಂ ಸಮಾಜದ ಮುಖಂಡರಾದ ರಫೀಕ್ ನದಾಫ್, ರಾಜು ಜಕಾತೆ ಮುಂತಾದ ಸದಸ್ಯರು ಒಂದುಗೂಡಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾರಂಭದಲ್ಲಿ ಶಕ್ತಿಪೀಠವಾಗಿರುವ ತುಳಜಾಪುರದ ತುಳಜಾಭವಾನಿ ದೇವಸ್ಥಾನದಿಂದ ಜ್ಯೋತಿ ತಂದು, ಗ್ರಾಮದ ಪ್ರಮುಖ ಮಾರ್ಗದಲ್ಲಿ ಮೆರವಣಿಗೆಯ ಮೂಲಕ ಆಗಮಿಸಿ ಘಟಸ್ಥಾಪನೆ ಮಾಡಲಾಯಿತು. ಕಳೆದ 9 ದಿನಗಳಿಂದ ನಿತ್ಯವೂ ಮಹಾಪೂಜೆ, ಆರತಿ, ಅನ್ನಪ್ರಸಾದ ಕಾರ್ಯಕ್ರಮ ಹಾಗೂ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು.

ಬರುವ ಸೋಮವಾರ, ದಿನಾಂಕ 26ರಂದು ಹುಣ್ಣಿಮೆಯ ದಿನ ರಾತ್ರಿ 12 ಗಂಟೆಗೆ ಹಾಲಿನಲ್ಲಿ ಚಂದ್ರದರ್ಶನ ಪಡೆದ ಬಳಿಕ ದೇವಿ ದರ್ಶನ ಪಡೆಯುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪವಿತ್ರ ಕಾರ್ಯಕ್ರಮಕ್ಕೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಆಹ್ವಾನಿಸಿದ್ದಾರೆ.
ದೇವಸ್ಥಾನ ಸಮಿತಿಯ ಸಂಚಾಲಕರಾದ ಕಾಶಿಮ ಮುಲ್ಲಾ ಹಾಗೂ ರಫೀಕ್ ನದಾಫ ಮಾತನಾಡಿ, “ಹಿಂದೂ-ಮುಸ್ಲಿಂ ಬಾಂಧವರು ಧರ್ಮಕ್ಕಾಗಿ ಭೇದಭಾವ ಮಾಡುವುದು ಅನಗತ್ಯ. ದೇವರು ಇದ್ದಾರೆ, ಆದರೆ ಅವರನ್ನು ನೋಡುವ ಭಾವನೆ ನಮ್ಮಲ್ಲಿ ಬರಬೇಕು. ದುರ್ಗಾಪರಮೇಶ್ವರಿ ದೇವಿಯ ಭಕ್ತಿ ಪ್ರಾರಂಭಿಸಿದಾಗಿನಿಂದ ನಮ್ಮ ಎಲ್ಲ ಕುಟುಂಬದವರಿಗೂ ಎಲ್ಲ ರೀತಿಯ ಅನುಕೂಲವಾಗಿದೆ” ಎಂದರು.
ದೇವಸ್ಥಾನ ಸಮಿತಿಯ ಸಂಚಾಲಕ ಸುರೇಶ್ ಕಾಗಲಿ ಮಾತನಾಡಿ, “ದುರ್ಗಾಪರಮೇಶ್ವರಿ ದೇವಸ್ಥಾನವು ಜಾಗೃತ ದೇವಸ್ಥಾನವಾಗಿದ್ದು, ಇಲ್ಲಿ ನಿರಂತರವಾಗಿ ದೇವಿಯ ದರ್ಶನ ಪಡೆಯುವವರಿಗೆ ದೇವಿ ಒಲಿದಿದ್ದಾಳೆ. ಅನೇಕರಿಗೆ ಒಳ್ಳೆಯದಾಗಿದೆ” ಎಂದರು.
ಅದೇ ರೀತಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜೈಪಾಲ್ ಕೊಕಟ್ನೂರ್ ಹಾಗೂ ಅಣ್ಣಪ್ಪಾ ಖಟಾವೆ ದೇವಿಯ ಭಕ್ತಿಯ ಕುರಿತು ಮಾತನಾಡಿದರು.
ಈ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅರ್ಚಕರಾದ ಹನುಮಂತ ಅಡಿಶೆರಿ, ಸಂತೋಷ್ ಬೋಗಾರ್ ಹಾಗೂ ಮಹಿಳಾ ಭಕ್ತರಾದ ಜೈಶ್ರೀ ಅನಿಲ್ ಕಾರ್ಜಿ, ಜೈಶ್ರೀ ಕಾರ್ಚಿ, ಸುನಿತಾ ಘಾರಗೆ, ಕಲಾವತಿ ಡೊಂಗರೆ, ಮಂಜುಳಾ ಜಕಾತೆ, ನಂದಿನಿ ಜಕಾತಿ, ಪದ್ಮ ಅಡಿಕೇರಿ, ವೈಷ್ಣವಿ ಸಂಗಮ್ ಕರಾಳೆ ಸೇರಿದಂತೆ ಅನೇಕ ಭಕ್ತರು ವಿಶೇಷವಾಗಿ ಶ್ರಮಿಸಿದರು.
