ಕಬ್ಬಿಗೆ ೫೫೦೦ ರೂಪಾಯಿ ದರ ಘೋಷಣೆ ಮಾಡುವಂತೆ ಆಗ್ರಹಿಸಿ ಚಿಕ್ಕೋಡಿ ತಾಲೂಕಿನ ರೈತರು ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದು, ರಸ್ತೆಯಲ್ಲೇ ಅಡುಗೆ ಮಾಡಿ ಊಟ ಸೇವಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಕ್ರೋಶ ಹೊರಹಾಕಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಹಾದುಹೋಗುವ ಚಿಕ್ಕೋಡಿ-ಮಿರಜ್ ಮುಖ್ಯ ರಸ್ತೆಯನ್ನು ಮುಂಜಾನೆಯಿಂದಲೇ ಬಂದ್ ಮಾಡಿದ ನೂರಾರು ರೈತರು, ಸರ್ಕಾರದ ವಿರುದ್ಧ ತೀವ್ರವಾಗಿ ಹರಿಹಾಯ್ದರು.
ಈ ಪ್ರತಿಭಟನೆಯಲ್ಲಿ ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರ, ಚಂದೂರ, ಇಂಗಳಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು. ಮುಂಜಾನೆಯಿಂದಲೇ ರಸ್ತೆಗೆ ಇಳಿದು ಧರಣಿ ಕುಳಿತ ರೈತರು, ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಸತತವಾಗಿ ಧರಣಿ ನಡೆಸಿದ ರೈತರು, ಮಧ್ಯಾಹ್ನದ ಊಟವನ್ನು ರಸ್ತೆಯಲ್ಲೇ ತಯಾರಿಸಿ, ರಸ್ತೆಯಲ್ಲೇ ಕುಳಿತು ಸೇವಿಸಿದರು. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಈ ಸ್ಥಳದಿಂದ ಕದಲುವುದಿಲ್ಲಎಂದು ಪಟ್ಟು ಹಿಡಿದು ಕುಳಿತದ್ದು ಕಂಡುಬಂತು.
ಮುಖ್ಯ ರಸ್ತೆ ತಡೆದ ಪರಿಣಾಮ ಮಿರಜ್ ಹಾಗೂ ಚಿಕ್ಕೋಡಿ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು, ಪ್ರಯಾಣಿಕರು ಪರದಾಡುವಂತಾಯಿತು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
