ಸರಿಯಾದ ಬೆಂಬಲ ಬೆಲೆ ಸಿಗದೆ ಕಂಗಾಲಾಗಿರುವ ಕಬ್ಬು ಬೆಳೆಗಾರರ ಆಕ್ರೋಶದ ಕಿಚ್ಚು ತಾಲೂಕಿನಾದ್ಯಂತ ತೀವ್ರಗೊಂಡಿದ್ದು, ಕಬ್ಬಿಗೆ ಪ್ರತಿ ಟನ್ಗೆ ೫,೫೦೦ ರೂಪಾಯಿ ದರ ಘೋಷಿಸಬೇಕೆಂದು ಆಗ್ರಹಿಸಿ ಕರೆ ನೀಡಿದ್ದ ಚಿಕ್ಕೋಡಿ ತಾಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ರೈತರ ಹೋರಾಟದಿಂದಾಗಿ ಇಡೀ ತಾಲೂಕಿನಾದ್ಯಂತ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಮುಂಜಾನೆಯಿಂದಲೇ ಬೀದಿಗಿಳಿದ ನೂರಾರು ರೈತರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಸಗೊಬ್ಬರ, ಕೂಲಿ, ಸಾಗಣೆ ಹಾಗೂ ಸಾಗುವಳಿ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದರೂ, ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರಿಗೆ ಸೂಕ್ತ ಬೆಲೆ ನೀಡದೆ ವಂಚಿಸುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.
”ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವವರೆಗೆ ಹಾಗೂ ಪ್ರತಿ ಟನ್ ಕಬ್ಬಿಗೆ ೫,೫೦೦ ರೂ. ನ್ಯಾಯಯುತ ಬೆಲೆ ಘೋಷಿಸುವವರೆಗೆ ನಮ್ಮ ಹೋರಾಟ ವಿಶ್ರಮಿಸುವುದಿಲ್ಲ ಎಂದರು.
ಸ್ತಬ್ಧಗೊಂಡ ಸಂಚಾರ
ಪ್ರತಿಭಟನೆಯ ಭಾಗವಾಗಿ ರೈತರು ಚಿಕ್ಕೋಡಿ-ಮಿರಾಜ್ ಮುಖ್ಯ ರಸ್ತೆಯನ್ನು ತಡೆದು ದರಣಿ ಸತ್ಯಾಗ್ರಹ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ
ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್: ಗಡಿಭಾಗದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಚಿಕ್ಕೋಡಿ-ಮಿರಾಜ್ ಮಾರ್ಗದಲ್ಲಿ ನೂರಾರು ವಾಹನಗಳು ಸಾಲಾಗಿ ನಿಂತು ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿತು.
ತಾಲೂಕಿನ ವಾಣಿಜ್ಯ ಸಂಕೀರ್ಣಗಳು, ಹೋಟೆಲ್ಗಳು ಹಾಗೂ ವ್ಯಾಪಾರ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಪ್ರಯಾಣಿಕರ ಹಾಗೂ ಸಾರ್ವಜನಿಕ ಆಸ್ತಿಯ ಸುರಕ್ಷತೆಯ ದೃಷ್ಟಿಯಿಂದ ಕಾಗವಾಡ, ಮೀರಜ್ ಹಾಗೂ ಸುತ್ತಮುತ್ತಲಿನ ಮಾರ್ಗಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಬಿಗಿ ಪೊಲೀಸ್ ಬಂದೋಬಸ್ತ್
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಚಿಕ್ಕೋಡಿ ತಾಲೂಕು ಪೊಲೀಸರು ಸೂಕ್ತ ಹಾಗೂ ಬಿಗಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
