Belagavi

ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಉಪ ಲೋಕಾಯುಕ್ತ ಭೇಟಿ

Share

ರಾಜ್ಯ ಲೋಕಾಯುಕ್ತದ ಮಾನ್ಯ ಉಪ ಲೋಕಾಯುಕ್ತರಾದ ಬಿ. ವೀರಪ್ಪ ಅವರು ಶನಿವಾರ (ಅ.31) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಮತೀರ್ಥ ನಗರದ ಬಾಲಕ ಮತ್ತು ಬಾಲಕಿಯರ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ವಸತಿ ಶಾಲೆಗಳ ಕಟ್ಟಡಗಳ ದುರಸ್ತಿ, ವಿದ್ಯಾರ್ಥಿಗಳ ಹಾಸಿಗೆ, ಹೊದಿಕೆ, ವಸತಿ ನಿಲಯದ ಸ್ವಚ್ಛತೆ, ಕಟ್ಟಡಗಳ ಬಣ್ಣ, ಆಹಾರದ ಗುಣಮಟ್ಟ, ದಿನಸಿ ಸಾಮಗ್ರಿಗಳ ಸಂಗ್ರಹಣೆ, ವಿದ್ಯಾರ್ಥಿಗಳಿಗೆ ನೀಡುವ ಹಾಲು ಮತ್ತು ಅಡುಗೆ ಎಣ್ಣೆ, ಅಡುಗೆ ಕೋಣೆಯ ಸ್ವಚ್ಛತೆ, ತರಕಾರಿಗಳ ಗುಣಮಟ್ಟ ಹಾಗೂ ಶೌಚಾಲಯಗಳ ಸ್ವಚ್ಛತೆಯನ್ನು ಪರಿಶೀಲಿಸಿದರು. ನಿಗದಿತ ಆಹಾರ ಮೆನುವಿನಂತೆ ಊಟ ಒದಗಿಸಲಾಗುತ್ತಿದೆಯೇ ಎಂಬುದರ ಕುರಿತು ಮಾಹಿತಿ ಪಡೆದುಕೊಂಡು, ಅಲ್ಪಾಹಾರ ಸೇವಿಸುವ ಮೂಲಕ ಅದರ ಗುಣಮಟ್ಟವನ್ನೂ ಪರಿಶೀಲಿಸಿದರು.

ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಿಬ್ಬಂದಿಗೆ ಮಾಸಿಕ ವೇತನವನ್ನು ನಿಗದಿತ ಸಮಯದಲ್ಲಿ ಪಾವತಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಮೆರಿಟ್ ಆಧಾರದ ಮೇಲೆ ವಸತಿ ನಿಲಯಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿ ಲೋಕಾಯುಕ್ತ ದೂರು ಸಲ್ಲಿಕೆ ಮತ್ತು ಸಂಪರ್ಕದ ವಿವರಗಳನ್ನು ಒಳಗೊಂಡ ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಿ, ಮಕ್ಕಳು ನಿರ್ಭೀತಿಯಿಂದ ವಾಸಿಸುವ ಹಾಗೂ ಕಲಿಯುವಂತಹ ಉತ್ತಮ ಸ್ನೇಹಪರ ವಾತಾವರಣವನ್ನು ಕಲ್ಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಎನ್ ಶಿವಕುಮಾರ್, ಬೆಳಗಾವಿ ಲೋಕಾಯುಕ್ತ ಅಧೀಕ್ಷಕ ಪ್ರಸನ್ನ ದೇಸಾಯಿ, ಲೋಕಾಯುಕ್ತ ಉಪ ನಿಬಂಧಕ ಅರವಿಂದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!