Belagavi

ಸಾರಿಗೆ ಇಲಾಖೆಯ ಕಚೇರಿಯಲ್ಲಿ ಏಜೆಂಟರ ಹಾವಳಿ ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮ: ಉಪ ಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ

Share

ರಾಜ್ಯ ಲೋಕಾಯುಕ್ತದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಶನಿವಾರ (ಅ.31) ಶಿವಾಜಿ ನಗರದ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿಗೆ ದಿಢೀರ್ ಭೇಟಿ ನೀಡಿ, ಕಚೇರಿಯ ಕಾರ್ಯನಿರ್ವಹಣೆ, ಸಿಬ್ಬಂದಿಗಳ ಹಾಜರಾತಿ, ವಾಹನಗಳ ನೋಂದಣಿ, ವಾಣಿಜ್ಯ ವಾಹನಗಳ ಪರವಾನಗಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಚೇರಿ ಆವರಣದಲ್ಲಿ ವಾಹನ ಚಾಲನಾ ಪರವಾನಗಿ ಹಾಗೂ ವಾಹನ ನೋಂದಣಿ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಏಜೆಂಟರು ಕಂಡುಬಂದರೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳ ವಿರುದ್ಧ ನೇರವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯದ ಬಳಕೆಗಾಗಿ ನೋಂದಾಯಿಸಿಕೊಂಡಿರುವ ವಾಹನಗಳನ್ನು ನಿಯಮಾನುಸಾರ ಮರುನೋಂದಣಿ ಮಾಡಿಸಿಕೊಳ್ಳದಿರುವುದು ಕಂಡುಬಂದಿದೆ. ಇಂತಹ ವಾಹನಗಳ ವಿರುದ್ಧ ಈವರೆಗೆ ಸಾರಿಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗಂಭೀರ ವಿಚಾರವಾಗಿದೆ. ಆದ್ದರಿಂದ, ಕೂಡಲೇ ಸಾರಿಗೆ ಕಾಯ್ದೆಯಡಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಮರುನೋಂದಣಿ ಮಾಡಿಸದ ಶಾಲಾ ವಾಹನಗಳನ್ನು ಕೂಡಲೇ ಜಪ್ತಿ ಮಾಡಬೇಕು. ಜಿಲ್ಲೆಯಲ್ಲಿ ಅನಧಿಕೃತ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ಅಂತಹ ವಾಹನಗಳನ್ನು ಪತ್ತೆಹಚ್ಚಿ ಯಾವುದೇ ಮುಲಾಜಿಲ್ಲದೆ ಜಪ್ತಿ ಮಾಡಬೇಕು. ಸಾರ್ವಜನಿಕರ ಸುರಕ್ಷತೆ ಹಾಗೂ ಸಾರಿಗೆ ನಿಯಮಗಳ ಪಾಲನೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

Tags:

error: Content is protected !!