ಮೇಕೆದಾಟು ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕೊನೆಗೂ ದೊಡ್ಡ ಹೆಜ್ಜೆ ಇಟ್ಟಿದೆ. ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ ಗೆದ್ದು ಯೋಜನೆ ಆರಂಭಕ್ಕೆ ಸಿದ್ಧತೆ ನಡೆಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯೋಜನೆಯ ಪ್ರಮುಖ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಭೂಮಿಗೆ ಪರ್ಯಾಯವಾಗಿ ಈಗಾಗಲೇ 2,500 ಎಕರೆ ಜಮೀನು ಗುರುತಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮತಿ ಸಿಕ್ಕ ತಕ್ಷಣವೇ ಕಾಮಗಾರಿ ಆರಂಭವಾಗಲಿದೆ.
ಮಂಡ್ಯದಲ್ಲಿಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮಂಡ್ಯದ ಹೊಳಲು ಸರ್ಕಲ್ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಳೆದು ನಿಂತಿರುವ ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ವೇಗವಾಗಿ ಕೆಲಸ ನಿರ್ವಹಿಸುತ್ತಿದೆ. ಮೇಕೆದಾಟು ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಯನ್ನು ಒದಗಿಸುವ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ವಹಿಸಲಾಗಿದ್ದು, ಈಗಾಗಲೇ ಯಶಸ್ವಿ ಸಭೆಗಳನ್ನು ನಡೆಸಲಾಗಿದೆ. ಅರಣ್ಯ ಇಲಾಖೆಗೆ ನೀಡಬೇಕಾದ ಪರ್ಯಾಯ ಭೂಮಿಯಲ್ಲಿ 2,500 ಎಕರೆ ಜಮೀನನ್ನು ಈಗಾಗಲೇ ಗುರುತಿಸಲಾಗಿದ್ದು, ಉಳಿದ ಭೂಮಿಯ ಹುಡುಕಾಟ ಪ್ರಕ್ರಿಯೆ ಚುರುಕಿನಿಂದ ಸಾಗಿದೆ. ಈ ಯೋಜನೆಯಿಂದ ರೈತರ ಜಮೀನು ಕೇವಲ 100 ರಿಂದ 500 ಎಕರೆ ಮಾತ್ರ ಸ್ವಾಧೀನವಾಗಲಿದ್ದು, ಈ ಭೂಸ್ವಾಧೀನ ಪ್ರಕ್ರಿಯೆಯು ಶೀಘ್ರದಲ್ಲೇ ಆರಂಭವಾಗಲಿದೆ. ಕೇಂದ್ರ ಸರ್ಕಾರದ ಪೋರ್ಟಲ್ನಲ್ಲಿ ಭೂಮಿಯ ವಿವರಗಳನ್ನು ಅಪ್ಲೋಡ್ ಮಾಡಿದ ತಕ್ಷಣ ಅಂತಿಮ ಅನುಮತಿ ದೊರೆಯುವ ನಿರೀಕ್ಷೆಯಿದೆ.
ಈ ಯೋಜನೆಯಿಂದ ಕಾವೇರಿ ಕೊಳ್ಳದ ರೈತರು ಹಾಗೂ ಹೇಮಾವತಿ ನೀರಾವರಿ ಪ್ರದೇಶಕ್ಕೆ ಅತ್ಯಂತ ಹೆಚ್ಚಿನ ಅನುಕೂಲವಾಗಲಿದೆ. ಮೇಕೆದಾಟಿನಲ್ಲಿ ಸುಮಾರು 60 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಸಂಕಷ್ಟದ ಸಮಯದಲ್ಲಿ ದಿನನಿತ್ಯ ಕ್ಯುಸೆಕ್ ಲೆಕ್ಕದಲ್ಲಿ ನೀರು ಹರಿಸುವ ಆದೇಶಗಳನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇದೇ ವೇಳೆ, ಏರ್ ಘಟಕ ಸ್ಥಾಪನೆಗೆ ಜಾಗ ನೀಡಿಲ್ಲ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಈಗಾಗಲೇ 100 ಎಕರೆ ಜಮೀನು ನೀಡಲಾಗಿದ್ದು, ಹೆಚ್ಚುವರಿ ಜಾಗ ಬೇಕಿದ್ದರೂ ಕೊಡಲು ಸಿದ್ಧರಿದ್ದೇವೆ ಎಂದಿದ್ದಾರೆ. ಯಾವುದೇ ವಿವಾದವಿಲ್ಲದ ಹಾಗೂ ರೈತರು ವಿರೋಧಿಸದ ಭೂಮಿಯನ್ನೇ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್, ಸಚಿವ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಶಾಸಕ ಉದಯ್, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.
