ಬಳ್ಳಾರಿ: ನಗರದಲ್ಲಿ ಮೈನಿಂಗ್ ಟಿಪ್ಪರ್ಗಳ ಹಾವಳಿಗೆ ಮತ್ತೊಂದು ಬಲಿಯಾಗಿದೆ. ರೇಡಿಯೋ ಪಾರ್ಕ್ ಬಳಿ ರಾತ್ರಿ ಸಾಗುತ್ತಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದ ಪರಿಣಾಮ ಯುವಕ ಸ್ಥಳದಲ್ಲೇ ದಾರುಣವಾಗಿ ಕೊನೆಯುಸಿರೆಳೆದಿದ್ದಾನೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು, ನಗರದಲ್ಲಿ ಅಕ್ರಮವಾಗಿ ಸಂಚರಿಸುವ ಮೈನಿಂಗ್ ವಾಹನಗಳಿಗೆ ಕೂಡಲೇ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಹತ್ತಿರ ರಾತ್ರಿ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಲ್ ಬಜಾರ್ ನಿವಾಸಿ ಅಬೂ (20) ಎಂಬ ಯುವಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ. ಯುವಕ ಪ್ರಯಾಣಿಸುತ್ತಿದ್ದ ಬೈಕ್ಗೆ ಮೈನಿಂಗ್ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ಭೀಕರತೆಗೆ ಆತನ ತಲೆಯ ಮೇಲೆ ಚಕ್ರ ಹರಿದು ತಲೆ ಸಂಪೂರ್ಣ ನಜ್ಜುಗುಜ್ಜಾಗಿದೆ.
ರಾತ್ರಿಯಾಗುತ್ತಿದ್ದಂತೆ ನಗರದೊಳಗೆ ಬೇಕಾಬಿಟ್ಟಿ ಸಂಚರಿಸುವ ಮೈನಿಂಗ್ ವಾಹನಗಳಿಂದ ಈ ಹಿಂದೆಯೂ ಹಲವು ಸರಣಿ ಅಪಘಾತಗಳು ನಡೆದಿದ್ದು, ಸ್ಥಳಕ್ಕೆ ಜಮಾಯಿಸಿದ ನೂರಾರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಈ ವಾಹನಗಳ ಹಾವಳಿಗೆ ತಕ್ಷಣ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
