ಮೂಡಲಗಿ: ಪಟ್ಟಣದ ಮೂಡಲಗಿ–ರಂಗಾಪುರ ರಸ್ತೆಯಲ್ಲಿರುವ ಶ್ರೀ ಶಿವಬೋಧರಂಗ ದೇವಸ್ಥಾನದ ಸಮೀಪ ಬುಧವಾರ ತಡರಾತ್ರಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಟ್ರಕ್ವೊಂದನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಅಶೋಕ ಲೇಲ್ಯಾಂಡ್ ಕಂಪನಿಯ ಟ್ರಕ್ನಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ದನದ ಮಾಂಸ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪೊಲೀಸರ ಪ್ರಾಥಮಿಕ ಅಂದಾಜಿನ ಪ್ರಕಾರ, ಟ್ರಕ್ನಲ್ಲಿ ಸುಮಾರು ಒಂದು ಟನ್ ತೂಕದ, ಅಂದಾಜು ₹1.50 ಲಕ್ಷ ಮೌಲ್ಯದ ದನದ ಮಾಂಸ ಪತ್ತೆಯಾಗಿದೆ.
ಪೊಲೀಸರು ಟ್ರಕ್ ಚಾಲಕನನ್ನು ತಡೆದು ವಾಹನದ ಬಳಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಚಾಲಕನ ಹೆಸರು ಹಾಗೂ ವಿಳಾಸ ಪತ್ತೆಯಾಗಿಲ್ಲ ಎಂದು ಹೇಳಲಾಗಿದ್ದು, ಟ್ರಕ್ನ ನೋಂದಣಿ ಸಂಖ್ಯೆ ಕೆಎ-71/2048 ಎಂದು ತಿಳಿಸಲಾಗಿದೆ.ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಾಗಾಟದ ಮೂಲ ಹಾಗೂ ಪರಾರಿಯಾಗಿರುವ ಚಾಲಕನ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಮೂಡಲಗಿ ಪಟ್ಟಣದಲ್ಲಿಯೇ ಅಕ್ರಮವಾಗಿ ದನದ ಮಾಂಸ ಸಾಗಾಟದ ದಂಧೆ ನಡೆಯುತ್ತಿದೆಯೇ ಅಥವಾ ಬೇರೆ ಪ್ರದೇಶದಿಂದ ಮಾಂಸವನ್ನು ಮೂಡಲಗಿ ಮಾರ್ಗವಾಗಿ ಸಾಗಿಸಲಾಗುತ್ತಿತ್ತೇ ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿವೆ. ಈ ಸಾಗಾಟದ ಹಿಂದೆ ಯಾರಿದ್ದಾರೆ, ಮಾಂಸ ಎಲ್ಲಿಂದ ತರಲಾಗಿತ್ತು ಹಾಗೂ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ವಿವರಗಳು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
