ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆ ನಿರ್ಮಿಸಲು ತಮ್ಮ ಜಮೀನು ನೀಡಿದ್ದ ರೈತರ ಮಕ್ಕಳಿಗೆ ನೌಕರಿ ಕಾಯಂಗೊಳಿಸುವುದಾಗಿ ನೀಡಿದ್ದ ಭರವಸೆಯನ್ನು ಸದ್ಯ ಆಡಳಿತ ಮಂಡಳಿ ನಿರಾಕರಿಸಿದ್ದರಿಂದ, ಸುಮಾರು 20 ಕಾರ್ಮಿಕರು ಸಕ್ಕರೆ ಕಾರ್ಖಾನೆಯ ಎದುರು ಮುಷ್ಕರ ಪ್ರಾರಂಭಿಸಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದಲೇ ಸಕ್ಕರೆ ಕಾರ್ಖಾನೆಯ ಎದುರು ಮುಷ್ಕರ ಪ್ರಾರಂಭಿಸಿದ್ದು, ಮುಷ್ಕರದ ಬಗ್ಗೆ ಧರಣಿ ನಿರತ ಸುಮಿತ್ ಕಾಂಬ್ಳೆ ವಿವರವಾದ ಮಾಹಿತಿ ನೀಡಿದರು. “ನಮ್ಮ ಹಿರಿಯರು ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ದಿನನಿತ್ಯ ಉಳುಮೆ ಮಾಡುತ್ತಿದ್ದ ಸುಮಾರು 43 ಎಕರೆ ಜಮೀನನ್ನು ಸಕ್ಕರೆ ಕಾರ್ಖಾನೆಗೆ ನೀಡಿದ್ದಾರೆ.
1993ರಲ್ಲಿ ಜಮೀನು ಖರೀದಿ ಮಾಡುವಾಗ ಸಕ್ಕರೆ ಕಾರ್ಖಾನೆಯ ಮಾಲೀಕರಾದ ಕೆ. ಪಿ. ಮಗ್ಗೆನವರ್ ಅವರು ‘ನಿಮ್ಮ ಮಕ್ಕಳನ್ನು ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇರಿಸಿಕೊಂಡು, ಅವರ ನೌಕರಿಯನ್ನು ಕಾಯಂಗೊಳಿಸುತ್ತೇವೆ’ ಎಂದು ಭರವಸೆ ನೀಡಿದ್ದರು. ಆದರೆ ಸುಮಾರು 33 ವರ್ಷಗಳು ಕಳೆದರೂ 20 ಕಾರ್ಮಿಕರನ್ನು ಕಾಯಂಗೊಳಿಸದೆ, ಈಗಲೂ ನಮ್ಮನ್ನು ಗುತ್ತಿಗೆ ಆಧಾರದ ಮೇಲೆಯೇ ಮುಂದುವರಿಸಿದ್ದಾರೆ. ಆದ್ದರಿಂದ ಕೂಡಲೇ ನಮ್ಮ ಸೇವೆಯನ್ನು ಕಾಯಂಗೊಳಿಸಿ ಆದೇಶ ಪತ್ರ ನೀಡಬೇಕು,” ಎಂದು ಒತ್ತಾಯಿಸಿದರು.
“ಇದೇ ಬೇಡಿಕೆಗಳಿಗಾಗಿ 2020ರಲ್ಲೂ ಮುಷ್ಕರ ನಡೆಸಿದ್ದೆವು. ಆಗ ನಮಗೆ ಸೇವೆ ಕಾಯಂಗೊಳಿಸುವುದಾಗಿ ಭರವಸೆ ನೀಡಿ, ಮತ್ತೆ ನಿರಾಶೆಗೊಳಿಸಿದ್ದಾರೆ. ಹೀಗಾಗಿ ಈಗ ಮರಳಿ ಮುಷ್ಕರ ಪ್ರಾರಂಭಿಸಿದ್ದೇವೆ,” ಎಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.
ಈ ಮುಷ್ಕರದಲ್ಲಿ ಕಾರ್ಮಿಕರಾದ ಸುಮಿತ್ ಕಾಂಬಳೆ, ಪ್ರಶಾಂತ ಕಾಂಬಳೆ, ಪಿಂಟು ದೇವನೇ, ಅಸ್ಲಾಂ ಸಾರ್ವಾನ್, ರಾಜು ದೊಂಡರೆ, ಅರುಣ್ ಭಜಂತ್ರಿ, ಪ್ರೇಮ್ ಕುಮಾರ್ ಚೌಹಾನ್, ಸಾಗರ್ ಸಾನೆ ಸೇರಿದಂತೆ ಅನೇಕ ಕಾರ್ಮಿಕರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
