ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಬರ ಪರಿಸ್ಥಿತಿ ಕುರಿತು ಮಾತನಾಡಿರುವ ನವಲಗುಂದ ಶಾಸಕ ಎನ್.ಹೆಚ್. ಕೊನರೆಡ್ಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಬದಿಗಿಟ್ಟು ಸಮನ್ವಯತೆಯಿಂದ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿರುವ ಆಸಕ್ತಿದಕರ ಪ್ರಸಂಗ ಜರುಗಿದೆ.

ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಶಾಸಕ ಎನ್.ಹೆಚ್. ಕೊನರೆಡ್ಡಿ, ಸಿಎಂ ಹಾಗೂ ಡಿಸಿಎಂ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ, ಇಲ್ಲಿಯವರೆಗೆ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರ ಸಂಕಷ್ಟದ ಒತ್ತಡ ತಾಳಲಾರದೆ ಶಾಸಕರೇ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ ಎಂದ ಅವರು, ಪರಸ್ಪರ ಬೊಟ್ಟು ಮಾಡಿಕೊಳ್ಳುವುದನ್ನು ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಕೇಂದ್ರದಲ್ಲಿ ರಾಜ್ಯದ ಸಚಿವರು ಪಕ್ಷಾತೀತವಾಗಿ ರೈತರ ಪರ ಧ್ವನಿ ಎತ್ತಬೇಕು ಎಂದು ಕರೆ ನೀಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಾಲಮನ್ನಾ ಮಾಡಿದ್ದನ್ನು ಸ್ಮರಿಸಿದರು. ಬರ ಪರಿಹಾರ, ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ನೀಗಿಸಲು ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ಇಂದೇ ದಿನಾಂಕ ನಿಗದಿಪಡಿಸುವಂತೆ ಆಗ್ರಹಿಸಿದರು. ಈ ವೇಳೆ ಪ್ರಲ್ಹಾದ ಜೋಶಿ ಅವರ ಕುರಿತು ಚರ್ಚೆ ಬಂದಾಗ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸಾಲಮನ್ನಾ, ಕಳಸಾ ಬಂಡೂರಿ, ಮೇಕೆದಾಟು ಹಾಗೂ ಬರ ಪರಿಹಾರಕ್ಕಾಗಿ ಎಲ್ಲರೂ ಒಕ್ಕಟ್ಟಾಗಿ ನಿಯೋಗ ತೆರಳಬೇಕೆಂದು ಕೊನರೆಡ್ಡಿ ಮನವಿ ಮಾಡಿದರು.
