ವಿಧಾನ ಪರಿಷತ್ತಿನಲ್ಲಿ ಬೋಲ್‌ವೆಲ್ ಕೊರೆಯುವ ನಿಯಮಗಳ ಉಲ್ಲಂಘನೆ ಹಾಗೂ ಅಂತರ್ಜಲ ಕುಸಿತದ ಬಗ್ಗೆ ಸದಸ್ಯ ಬಸವರಾಜ್ ಹೊರಟ್ಟಿ ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗಮನ ಸೆಳೆಯಿತು.

ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ, ಬೋರ್‌ವೆಲ್ ಕೊರೆಯುವಾಗ ಕಡ್ಡಾಯವಾಗಿ ಪಾಲಿಸಬೇಕಾದ ಅಂತರದ ನಿಯಮಗಳು ಸರಿಯಾಗಿ ಜಾರಿಯಾಗುತ್ತಿಲ್ಲವಾದ್ದರಿಂದ ತೀವ್ರ ನೀರಿನ ಕೊರತೆ ಉಂಟಾಗಿದೆ ಎಂದು ಎಚ್ಚರಿಸಿದರು. ಅರಣ್ಯ ನಾಶವನ್ನು ತಡೆಯುವುದು, ಬರದ ಪರಿಸ್ಥಿತಿಯನ್ನು ಎದುರಿಸಲು ಚೆಕ್ ಡ್ಯಾಮ್ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವುದು ಮತ್ತು ರೈತರಿಗೆ ಏಕ ಬೆಳೆ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಅವಶ್ಯ ಎಂದರು. ಜೊತೆಗೆ, ಗ್ಯಾರಂಟಿ ಯೋಜನೆಗಳನ್ನು ಕೇವಲ ಹಣ ಹಂಚಿಕೆ ಮಾಡದೆ ಬಡವರಿಗೆ ಮಾತ್ರ ಸೀಮಿತಗೊಳಿಸಿ, ಅವರಲ್ಲಿ ಜವಾಬ್ದಾರಿ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಹೊರಟ್ಟಿ ಅವರ ಹೇಳಿಕೆಗೆ ಮಧ್ಯಪ್ರವೇಶಿಸಿ ತಿರುಗೇಟು ನೀಡಿದ ಎಂ.ಎಲ್.ಸಿ. ನಾಗರಾಜ್ ಯಾದವ್, ಗ್ಯಾರಂಟಿ ಯೋಜನೆಗಳ ಬಗ್ಗೆ ತಾತ್ಸಾರ ಭಾವನೆ ಬೇಡ ಎಂದರು. ಯುವನಿಧಿ ಯೋಜನೆಯು ಯುವಕರ ಸಬಲೀಕರಣಕ್ಕೆ ನೆರವಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುವ 2000 ರೂಪಾಯಿ ಬಡತನ ನಿರ್ಮೂಲನೆಯ ಪ್ರಮುಖ ಉದ್ದೇಶ ಹೊಂದಿದೆ. ಆದ್ದರಿಂದ ಜನಪರ ಯೋಜನೆಗಳನ್ನು ಅಪಹಾಸ್ಯ ಮಾಡಬಾರದು ಎಂದು ಆಡಳಿತ ಪಕ್ಷದ ಪರವಾಗಿ ಬಲವಾಗಿ ಸಮರ್ಥಿಸಿಕೊಂಡರು. ಇದಕ್ಕೆ ಹೊರಟ್ಟಿ ಅವರು ಕೇವಲ ಹಣ ನೀಡದೆ ಅದರೊಂದಿಗೆ ಜವಾಬ್ದಾರಿಗಳನ್ನು ನೀಡಬೇಕೆಂದರು.
