ಕಬ್ಬು ಬೆಳೆಗಾರರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರದ ನಿರ್ಲಕ್ಷ್ಯ ಹಾಗೂ ಕಾರ್ಖಾನೆಗಳ ವಂಚನೆ ಖಂಡಿಸಿ ಸೆಪ್ಟೆಂಬರ್ 29 ರಂದು ರಾಜ್ಯಾದ್ಯಂತ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಚೂನ್ನಪ್ಪ ಪೂಜಾರಿ ತಿಳಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ ರೂ. 5,500 ವೈಜ್ಞಾನಿಕ ಬೆಲೆ ಹಾಗೂ ಇಥೆನಾಲ್ ಖರೀದಿಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.


ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ರೈತ ಮುಖಂಡ ಚೂನ್ನಪ್ಪ ಪೂಜಾರಿ, ಕಳೆದ 10-16 ವರ್ಷಗಳಿಂದ ತೀವ್ರ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಲು ಸೆ. 29 ರಂದು ಶಶಿಕಾಂತ್ ಗುರುಜಿ, ರಾಜು ಶೆಟ್ಟಿ ಮತ್ತು ಕಿಶನ್ ನಂದಿ ಸೇರಿದಂತೆ ರಾಜ್ಯದ 31 ಜಿಲ್ಲೆಗಳ ರೈತ ಮುಖಂಡರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು. ದಶಕಗಳಿಂದ ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಕೇವಲ ರೂ. 31 ರಲ್ಲೇ ಉಳಿದಿದ್ದು, ಅದನ್ನು ರೂ. 60 ಕ್ಕೆ ಏರಿಸಬೇಕು. ಮೋಸದ ಎಫ್.ಆರ್.ಪಿ (FRP) ಪದ್ಧತಿ ಕೈಬಿಟ್ಟು ಪ್ರತಿ ಟನ್ ಕಬ್ಬಿಗೆ ರೂ. 5,500 ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.ಇಥೆನಾಲ್ ಖರೀದಿಯನ್ನು ಶೇ. 30 ಕ್ಕೆ ಸೀಮಿತಗೊಳಿಸಿರುವುದು ಮೆಕ್ಕೆಜೋಳ ಮತ್ತು ಭತ್ತ ಬೆಳೆಗಾರರಿಗೂ ಆರ್ಥಿಕ ಹೊಡೆತ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶ್ರೀಮಂತ ಪಾಟೀಲ್ ಒಡೆತನದ ಕಾರ್ಖಾನೆಗಳು ಸೇರಿದಂತೆ ಬೈಲಹೊಂಗಲ ಹಾಗೂ ಬಾಗಲಕೋಟೆ ಭಾಗದ ಕೆಲವು ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ಇನ್ನೂ ಪಾವತಿಸಿಲ್ಲ. ಈ ಕೂಡಲೇ ಬಾಕಿ ಹಣ ಬಿಡುಗಡೆಗೊಳಿಸಬೇಕು ಎಂದು ಸಿಎಂ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಎಚ್ಚರಿಕೆ ನೀಡಿದರು. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಪ್ರಲ್ಹಾದ ಜೋಶಿ ಅವರು ಮಧ್ಯಪ್ರವೇಶಿಸಿ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮುಂದುವರಿಯಲಿದೆ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಸಂಸದ ರಾಜು ಶೆಟ್ಟಿ, ಕಳೆದ 9 ವರ್ಷದಲ್ಲಿ ಸಕ್ಕರೆ ಬೆಲೆ ಹೆಚ್ಚಾಗಿಲ್ಲವೆಂದರೆ ಆಡಳಿತ ಪಕ್ಷದಲ್ಲಿದ್ದ ಪ್ರಭಾಕರ ಕೋರೆ ಸೇರಿದಂತೆ ಇನ್ನುಳಿದವರು ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿದರು. ಕಾರ್ಖಾನೆಗಳು ರೈತರ ಬೆಂಬಲಕ್ಕೆ ನಿಲ್ಲದಿದ್ದರೆ ಯಾವುದೇ ಕಾರ್ಖಾನೆಯನ್ನು ಆರಂಭಿಸಲು ಬಿಡುವುದಿಲ್ಲವೆಂದು ಕಡಂಡು ಎಚ್ಚರಿಕೆ ನೀಡಿದರು.
