ಕರ್ನಾಟಕ ರಾಜ್ಯದಿಂದ ಭಾರತ ದೇಶದ ಪ್ರಧಾನಿಯಾಗಿರುವ ಏಕೈಕ ಕನ್ನಡಿಗ ಎಚ್. ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರ ನಿಧನಕ್ಕೆ ರಾಜ್ಯ ಹಾಗೂ ದೇಶಾದ್ಯಂತ ಇರುವ ಅವರ ಅಭಿಮಾನಿಗಳು ತೀವ್ರ ದುಃಖ ವ್ಯಕ್ತಪಡಿಸುತ್ತಿದ್ದಾರೆ. ಜಾತ್ಯತೀತ ಜನತಾದಳದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಕಾಗವಾಡದಲ್ಲಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದು ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮಗ್ಗೆನವರ್ ಹೇಳಿದರು.


ಸೋಮವಾರ ಕಾಗವಾಡದ ಜಾತ್ಯತೀತ ಜನತಾದಳದ ಕಚೇರಿಯಲ್ಲಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶಹಾಜಹಾನ್ ದೊಂಗರ್ಗಾವ್ ಅವರ ಮುಖ್ಯ ಉಪಸ್ಥಿತಿಯಲ್ಲಿ ಶ್ರೀಮತಿ ಚೆನ್ನಮ್ಮ ಅವರಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.
ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನವರ್ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾ, “ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋದಾಗೆಲ್ಲಾ, ತಾಯಿ ಚೆನ್ನಮ್ಮ ಅವರು ನಮ್ಮ ಬಗ್ಗೆ ಪ್ರೀತಿಯಿಂದ ವಿಚಾರಿಸುತ್ತಿದ್ದರು. ನಮಗೆ ಊಟ ಬಡಿಸಿ, ನಮ್ಮ ಕ್ಷೇಮ ಸಮಾಚಾರಗಳನ್ನು ಕೇಳಿ ಕಳುಹಿಸುತ್ತಿದ್ದರು” ಎಂದು ಭಾವುಕರಾಗಿ ನುಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಅಥಣಿಯ ಮಾಜಿ ಶಾಸಕ ಶಹಾಜಹಾನ್ ದೊಂಗರ್ಗಾವ್ ಮಾತನಾಡಿ, “ದೇಶದ ಹೆಮ್ಮೆಯ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಮಾತೃಶ್ರೀಯವರಾದ ಶ್ರೀಮತಿ ಚೆನ್ನಮ್ಮ ಅವರ ನಿಧನದಿಂದ ಇಡೀ ರಾಜ್ಯದ ಜೆಡಿಎಸ್ ಕಾರ್ಯಕರ್ತರು ದುಃಖದ ಸಾಗರದಲ್ಲಿ ಮುಳುಗಿದ್ದಾರೆ. ದೇವೇಗೌಡರು ಇಷ್ಟೊಂದು ದೊಡ್ಡ ಸಾಧನೆ ಮಾಡಲು ಶ್ರೀಮತಿ ಚೆನ್ನಮ್ಮ ಅವರೇ ಪ್ರೇರಣಾ ಶಕ್ತಿಯಾಗಿದ್ದರು ಮತ್ತು ಅವರ ಬೆನ್ನೆಲುಬಾಗಿ ನಿಂತಿದ್ದರು. ಪ್ರತಿ ಸಲ ನಾವು ಹೋದಾಗಲೂ ನಮ್ಮ ಊಟ ಉಪಚಾರಗಳನ್ನು ಕೇಳುತ್ತಿದ್ದ ಶ್ರೀಮತಿ ಚೆನ್ನಮ್ಮ ಅವರು ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದೇವೇಗೌಡರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಜೆಡಿಎಸ್ ಕಾರ್ಯಕರ್ತರ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇವೆ” ಎಂದರು.
ಹುಕ್ಕೇರಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಸವರಾಜ್ ಪಾಟೀಲ್ ಮಾತನಾಡಿ, “ತಾಯಿ ಚೆನ್ನಮ್ಮ ಅವರು ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ದೊಡ್ಡ ಪ್ರೇರಣಾ ಶಕ್ತಿಯಾಗಿದ್ದರು. ಅವರ ಆಶೀರ್ವಾದ ಮುಂದೆಯೂ ನಮ್ಮ ಪಕ್ಷದ ಮೇಲಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದವರು:
ಈ ಶ್ರದ್ಧಾಂಜಲಿ ಸಭೆಯಲ್ಲಿ ಜೆಡಿಎಸ್ ಪಕ್ಷದ ತಾಲೂಕಿನ ಹಿರಿಯ ಮುಖಂಡರು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕನಶೆಟ್ಟಿ, ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಮುಖಂಡರಾದ ಎಸ್. ಎಸ್. ಡವಳೇಶ್ವರ್, ಶಬ್ಬೀರಗೌಡ ಪಾಟೀಲ್, ಜಕ್ಕಪ್ಪ ದರಿಗೌಡರ್, ಅಥಣಿ ತಾಲೂಕು ಅಧ್ಯಕ್ಷ ದುಂಡಪ್ಪ ನಿಂಗನೂರ, ವಿದ್ಯಾಸಾಗರ್ ಈರನ್ನವರ್, ಸಂದೀಪ್ ಡಿಂಪ್ಳೆ, ಮಹೇಶ್ ಪೂಜಾರಿ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
