Uncategorized

*ಧಾರವಾಡ: ವೈದ್ಯನ ಕೊಲೆ ಮಾಡಿ ಮಗುವಿನ ಕೊರಳಿಗೂ ಇರಿದ ತಾಯಿ; ಪೊಲೀಸ್ ಕಮಿಷನರ್ ಸಮಯಪ್ರಜ್ಞೆಯಿಂದ ಬದುಕಿತು ಕಂದಮ್ಮ!*

Share

ಧಾರವಾಡದ ಬಾರಾಕೋಟ್ರಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ವೈದ್ಯ ಡಾ. ಕಿರಣ್ ಭೀಕರ ಹತ್ಯೆ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದೆ. ಪತಿಯನ್ನು ಹತ್ಯೆ ಮಾಡಿ ಮಗುವಿನ ಮೇಲೆಯೂ ದಾಳಿ ನಡೆಸಿದ್ದ ತಾಯಿಯ ಕ್ರೌರ್ಯ ಒಂದೆಡೆಯಾದರೆ, ಪೊಲೀಸ್ ಕಮಿಷನರ್ ಅವರ ಸಮಯಪ್ರಜ್ಞೆಯಿಂದ ರಕ್ತದ ಮಡುವಿನಲ್ಲಿದ್ದ ಮಗುವಿನ ಪ್ರಾಣ ಪವಾಡಸದೃಶ ರೀತಿಯಲ್ಲಿ ಉಳಿದಿದೆ.

 

ಧಾರವಾಡದ ಬಾರಾಕೋಟ್ರಿ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಬುಧವಾರ ವೈದ್ಯ ಡಾ. ಕಿರಣ್ ಅವರನ್ನು ಪತ್ನಿ ಪ್ರಿಯಾಂಕಾ ಹತ್ಯೆ ಮಾಡಿ, ಪುಟ್ಟ ಮಗು ನೇಹಿತ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದು ಕ್ರೌರ್ಯ ಮೆರೆದಿದ್ದಳು. ಘಟನಾ ಸ್ಥಳದಲ್ಲಿ ತಾಯಿ ಬೆಡ್ ಮೇಲೆ ಮೊಬೈಲ್ ನೋಡುತ್ತ ಕುಳಿತಿದ್ದರೆ, ಕುತ್ತಿಗೆಗೆ ಚಾಕು ಚುಚ್ಚಿದ ಸ್ಥಿತಿಯಲ್ಲಿ ಮಗು ಬೆಡ್ ಕೆಳಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮಗುವಿನ ಉಸಿರಾಟವನ್ನು ತಕ್ಷಣವೇ ಗಮನಿಸಿ, ವಿಳಂಬ ಮಾಡದೇ ಸ್ವತಃ ಮಗುವನ್ನು ಎತ್ತಿಕೊಂಡು ಬಂದು ಸಿಬ್ಬಂದಿ ಮೂಲಕ ಆಸ್ಪತ್ರೆಗೆ ದಾಖಲಿಸಿದರು. ಕಮಿಷನರ್ ಅವರ ಈ ಸಮಯಪ್ರಜ್ಞೆ ಮತ್ತು ಸಮಯಕ್ಕೆ ಸರಿಯಾಗಿ ಸಿಕ್ಕ ಚಿಕಿತ್ಸೆಯಿಂದಾಗಿ ಮಗು ನೇಹಿತ್‌ ಆರೋಗ್ಯ ಈಗ ಶೇಕಡಾ ೧೦೦ ರಷ್ಟು ಸುಧಾರಿಸಿದ್ದು, ಪ್ರಾಣಪಾಯದಿಂದ ಪಾರಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಆರೋಪಿ ಪತ್ನಿ ಪ್ರಿಯಾಂಕಳನ್ನು ಅಂದೇ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Tags:

error: Content is protected !!