Uncategorized

*ಬೆಳಗಾವಿ: ಅರ್ಧಕ್ಕೆ ನಿಂತ ಕಾಮಗಾರಿ, ಅವೈಜ್ಞಾನಿಕ ಚರಂಡಿ! ಪಾಂಗುಳ ಗಲ್ಲಿ, ಆರ್‌ಪಿಡಿ ಸರ್ಕಲ್‌ನಲ್ಲಿ ಪ್ರವಾಹ ಸದೃಶ್ಯ ಸ್ಥಿತಿ – ವರ್ತಕರಿಗೆ ಲಕ್ಷಾಂತರ ರೂಪಾಯಿ ನಷ್ಟ!*

Share

ಕುಂದಾನಗರಿ ಬೆಳಗಾವಿಯಲ್ಲಿ ಸುರಿದ ಭಾರಿ ಮಳೆಗೆ ಮಹಾನಗರ ಪಾಲಿಕೆಯ ಯೋಜನಾ ರಹಿತ ಕಾಮಗಾರಿಯ ಬಣ್ಣ ಬಯಲಾಗಿದೆ! ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಪಾಂಗುಳ ಗಲ್ಲಿ ಹಾಗೂ ಆರ್‌ಪಿಡಿ ಸರ್ಕಲ್ ಸುತ್ತಮುತ್ತ ಚರಂಡಿ ನೀರು ರಸ್ತೆಗೇರಿದ್ದು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಬೆಳಗಾವಿ ನಗರದ ಪ್ರಮುಖ ಹಾಗೂ ಜನನಿಬಿಡ ಮಾರುಕಟ್ಟೆ ಪ್ರದೇಶವಾಗಿರುವ ಪಾಂಗುಳ ಗಲ್ಲಿ ಮತ್ತು ಗಣಪತ್ ಗಲ್ಲಿಯ ವ್ಯಾಪಾರಿಗಳಿಗೆ ಮಳೆ ನೀರು ಕಂಟಕವಾಗಿ ಪರಿಣಮಿಸಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ರಸ್ತೆಗಳನ್ನು ಅರ್ಧಮರ್ಧ ಅಗೆದು ಹಾಕಿದ್ದರಿಂದ ಮಳೆ ನೀರು ಹರಿದುಹೋಗಲು ಮಾರ್ಗವಿಲ್ಲದೇ ನೇರವಾಗಿ ಅಂಗಡಿ-ಮುಂಗಟ್ಟುಗಳೊಳಗೆ ನುಗ್ಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಶೋಕೇಸ್ ಹಾಗೂ ಸರಕು-ಸಾಮಗ್ರಿಗಳು ನೀರಿನಲ್ಲಿ ಮುಳುಗಿ ವ್ಯಾಪಾರಿಗಳು ಭಾರಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ರಸ್ತೆ ಬದಿ ವ್ಯಾಪಾರಿಗಳಂತೂ ವ್ಯಾಪಾರವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಷ್ಟೇ ಅಲ್ಲದೆ, ಚರಂಡಿಗಳು ಬ್ಲಾಕ್ ಆಗಿ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿರುವುದರಿಂದ ಇಡೀ ಮಾರುಕಟ್ಟೆ ಪ್ರದೇಶ ದುರ್ನಾತದಿಂದ ಕೂಡಿದೆ. ಇತ್ತ ಆರ್‌ಪಿಡಿ ಸರ್ಕಲ್‌ನಲ್ಲೂ ಪ್ರತಿ ಮಳೆಗಾಲದಲ್ಲೂ ಎದುರಾಗುವ ಚರಂಡಿ ನೀರು ರಸ್ತೆಗೆ ಬರುವ ಹಳೆಯ ಸಮಸ್ಯೆಯೇ ಮುಂದುವರಿದಿದೆ. ಜನಪ್ರತಿನಿಧಿಗಳು ಪ್ರತಿಬಾರಿಯೂ ಕೇವಲ ಸಾಂತ್ವನ-ಆಶ್ವಾಸನೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪಾಲಿಕೆ ಆಡಳಿತದ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಾಗೂ ವರ್ತಕರು ಹಿಡಿಶಾಪ ಹಾಕುತ್ತಿದ್ದು, ತಕ್ಷಣವೇ ಪರಿಹಾರ ಕಲ್ಪಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Tags:

error: Content is protected !!