ಬೆಳಗಾವಿ-ಬಾಗಲಕೋಟೆ ಮುಖ್ಯ ರಸ್ತೆಯಲ್ಲಿರುವ ಮುತಗಾ ಗ್ರಾಮದ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿತ್ಯ ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ. ರಸ್ತೆ ವೇಗನಿಯಂತ್ರಕಗಳು (ಸ್ಪೀಡ್ ಬ್ರೇಕರ್) ಇಲ್ಲದೆ ಅಪಾಯ ಆಹ್ವಾನಿಸುವಂತಾಗಿದ್ದು, ತಕ್ಷಣವೇ ಸ್ಪೀಡ್‌ಬ್ರೇಕರ್ ಅಳವಡಿಸುವಂತೆ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರ್ಸೆ ಅವರಿಗೆ ಮನವಿ ಸಲ್ಲಿಸಲಾಗಿದೆ.

ಬೆಳಗಾವಿ ಸಮೀಪದ ಮುತಗಾ ಗ್ರಾಮಸ್ಥರು ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ್ ಬೋರ್ಸೆ ಅವರನ್ನು ಭೇಟಿಯಾಗಿ, ಬೆಳಗಾವಿ-ಬಾಗಲಕೋಟೆ ಮುಖ್ಯ ರಸ್ತೆಯಲ್ಲಿ ಎದುರಾಗುತ್ತಿರುವ ಸಂಚಾರ ಸಮಸ್ಯೆಯ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಮುತಗಾ ಗ್ರಾಮದ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ‘ನ್ಯೂ ಇಂಗ್ಲಿಷ್ ಸ್ಕೂಲ್’ ಹಾಗೂ ‘ಹೈಯರ್ ಪ್ರೈಮರಿ ಸ್ಕೂಲ್’ ಎಂಬ ಎರಡು ಪ್ರಮುಖ ಶಾಲೆಗಳಿದ್ದು, ಪ್ರತಿದಿನ ನೂರಾರು ಶಾಲಾ ಮಕ್ಕಳು, ರೈತರು ಹಾಗೂ ಹಿರಿಯ ನಾಗರಿಕರು ಈ ಕಾರ್ಯನಿರತ ರಸ್ತೆಯನ್ನು ದಾಟಬೇಕಾಗಿದೆ. ವಿಮಾನ ನಿಲ್ದಾಣದ ರಸ್ತೆಯಾಗಿರುವುದರಿಂದ ವಾಹನಗಳು ಅತಿ ವೇಗವಾಗಿ ಚಲಿಸುತ್ತಿದ್ದು, ಹಿಂದೆ ಇದ್ದ ಸ್ಪೀಡ್ ಬ್ರೇಕರ್‌ಗಳನ್ನು ತೆಗೆದುಹಾಕಿರುವುದರಿಂದ ಈಗ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ರಸ್ತೆ ದಾಟುವಾಗ ಶಾಲಾ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಈ ರಸ್ತೆಯಲ್ಲಿ ವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಬೇಕು ಎಂದು ಗ್ರಾಮಸ್ಥರ ನಿಯೋಗವು ಕಮಿಷನರ್‌ಗೆ ಮನವಿ ಪತ್ರ ನೀಡಿದೆ. ಮುತಗಾ ಗ್ರಾಮಸ್ಥರ ಈ ಮನವಿಯನ್ನು ಆಲಿಸಿದ ಪೊಲೀಸ್ ಕಮಿಷನರ್ ಭೂಷಣ್ ಬೋರ್ಸೆ ಅವರು, ಸಮಸ್ಯೆಯ ತೀವ್ರತೆಯನ್ನು ಪರಿಗಣಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಂಡು ಸ್ಪೀಡ್ ಬ್ರೇಕರ್ ಅಳವಡಿಸುವ ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿದ್ದ ಮುಖಂಡರು ತಿಳಿಸಿದ್ದಾರೆ.
