Kagawad

ರೈತರು ಒಂದುಗೂಡಿ ದುಡಿಯಿರಿ, ನಿಮ್ಮ ಬೆಳೆಗಳಿಗೆ ನೀವೇ ಬೆಲೆ ಕಟ್ಟಿ: ಹಂಚಿನಾಳ ಮಠದ ಪೂಜ್ಯ ಮಹೇಶಾನಂದ ಸ್ವಾಮೀಜಿ ಕರೆ

Share

“ರೈತರು ದೀರ್ಘಕಾಲ ಆರೋಗ್ಯವಾಗಿ ಬದುಕಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೇವಲ ತಮ್ಮ ಜಮೀನುಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದು ಲಾಭ ಗಳಿಸಲು ಮುಂದಾಗದೆ, ದೈನಂದಿನ ಜೀವನಕ್ಕೆ ಅತ್ಯಾವಶ್ಯಕವಾಗಿ ಬೇಕಿರುವ ಜೋಳ ಹಾಗೂ ತರಕಾರಿಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದು ಸೇವಿಸಬೇಕು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಲಬೆರಿಕೆ ಹೆಚ್ಚಾಗುತ್ತಿರುವುದು ಅತ್ಯಂತ ಚಿಂತಾಜನಕ ವಿಷಯವಾಗಿದೆ,” ಎಂದು ಹಂಚಿನಾಳ ಮಠದ ಪರಮ ಪೂಜ್ಯ ಶ್ರೀ ಮಹೇಶಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಶೇಡಬಾಳದ ಪ್ರಗತಿಪರ ರೈತ ರಮೇಶ್ ಚೌಗುಲೆ ಅವರು ಕೆಲ ರೈತರೊಂದಿಗೆ ಸೇರಿ ಹಮ್ಮಿಕೊಂಡಿರುವ ‘ವರದ ಏತ ನೀರಾವರಿ ಯೋಜನೆ’ಯ ಇಂಟೇಕ್ ಟ್ಯಾಂಕ್‌ಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿ, ನಂತರ ಯುವ ರೈತರನ್ನುದ್ದೇಶಿಸಿ ಅವರು ಮಾತನಾಡಿದರು.

“ಕೆಲವು ರೈತರು ಇಂದಿಗೂ ಹಳೆಯ ಪದ್ಧತಿಯ ಬೇಸಾಯವನ್ನೇ ಮಾಡುತ್ತಿದ್ದಾರೆ. ಅದನ್ನು ಬದಲಾಯಿಸಿ ಹೊಸ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಅಲ್ಪಾವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಿಗುವ ಕೃತಕ ಬೀಜಗಳು ಹಾಗೂ ರಾಸಾಯನಿಕ ಗೊಬ್ಬರಗಳ ವ್ಯಾಮೋಹಕ್ಕೆ ಬಿದ್ದು, ರೈತರು ವಿಷಕಾರಿಯಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದನ್ನು ಸೇವಿಸಿ ಮನುಷ್ಯ ಎಷ್ಟು ದಿನ ಬದುಕಲು ಸಾಧ್ಯ? ಇಲ್ಲಿನ ರೈತರೇ ತಮಗೆ ಊಟ ಮಾಡಲು ಬೇಕಾದ ಜೋಳವನ್ನು ಖರೀದಿಸಲು ವಿಜಯಪುರಕ್ಕೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ, ನಿಮ್ಮ ಜಮೀನಿನಲ್ಲಿ ಜೋಳ ಮತ್ತು ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಿರಿ, ನೀವೂ ಸೇವಿಸಿ ಇತರರಿಗೂ ನೀಡಿ” ಎಂದು ಕಿವಿಮಾತು ಹೇಳಿದರು.

“ನೀವು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ದಲಾಲರು ಬೆಲೆ ಕಟ್ಟುತ್ತಿದ್ದಾರೆ. ಶೇಕಡಾ 80 ರಷ್ಟು ಕಮಿಷನ್ ಪಡೆಯುವ ದಲಾಲರು ಶ್ರೀಮಂತರಾಗುತ್ತಿದ್ದಾರೆ, ಆದರೆ ಬೆವರು ಹರಿಸಿದ ರೈತರು ಮಾತ್ರ ಬಡವರಾಗಿಯೇ ಉಳಿಯುತ್ತಿದ್ದಾರೆ. ನೀವು ಬೆಳೆದ ಬೆಳೆಗಳಿಗೆ ಬೆಲೆ ಕಟ್ಟುವ ಸಾಮರ್ಥ್ಯ ನಿಮ್ಮಲ್ಲಿ ಬರಬೇಕು, ಆಗ ಮಾತ್ರ ರೈತ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ನಿಮ್ಮ ಹಿರಿಯರು ಕಷ್ಟಪಟ್ಟು ಭೂಮಿಯಲ್ಲಿ ದುಡಿಯುತ್ತಿದ್ದರು ಮತ್ತು ಯಾವುದೇ ದುಶ್ಚಟಗಳಿಗೆ ಬಲಿಯಾಗುತ್ತಿರಲಿಲ್ಲ. ಆದರೆ ಇಂದಿನ ಕೆಲವು ಯುವಕರು ಗುಟ್ಕಾ, ಮದ್ಯ ಸೇವನೆಗೆ ಬಲಿಯಾಗುತ್ತಿರುವುದು ತಪ್ಪು ನಡೆ. ರೈತ ಮನಸ್ಸು ಮಾಡಿ ಬೆಳೆ ಬೆಳೆಯುವುದನ್ನು ನಿಲ್ಲಿಸಿದರೆ ಇಡೀ ಜಗತ್ತೇ ಉಪವಾಸ ಬೀಳುವ ದಿನಗಳು ದೂರವಿಲ್ಲ,” ಎಂದು ರೈತರಿಗೆ ಅವರ ಜವಾಬ್ದಾರಿಯ ಅರಿವು ಮೂಡಿಸಿದರು. ಜೊತೆಗೆ, ಜನ್ಮ ನೀಡಿದ ತಂದೆ-ತಾಯಿಯನ್ನು ಗೌರವದಿಂದ ಕಂಡು, ಅವರ ಕಷ್ಟ-ಸುಖಗಳಿಗೆ ಹೆಗಲಾಗುವ ಮೂಲಕ ಉತ್ತಮ ಮನುಷ್ಯನಾಗಿ ಬಾಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಯುವಕ ಸಂಘದ ಅಧ್ಯಕ್ಷ ಶಿವಗೌಡ ಕಾಗೆ, ಶಿರುಗುಪ್ಪಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಅರುಣ ಪರಾಂಡೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಜಿತ್ ಚೌಗುಲೆ, ರವೀಂದ್ರ ಪೂಜಾರಿ, ಶೇಡಬಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ್, ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಜ್ಯೋತಿಕುಮಾರ್ ಪಾಟೀಲ್, ಸುಭಾಷ್ ಕಠಾರೆ, ಭರತ್ ನಾಂದ್ರೆ, ರಾಜಾರಾಮ್ ಗಡಗೆ ಸೇರಿದಂತೆ ಕಾಗವಾಡ, ಶೇಡಬಾಳ, ಉಗಾರ್, ಕುಸನಾಳ, ಮುಳವಾಡ ಹಾಗೂ ಶಿರಗುಪ್ಪಿ ಮುಂತಾದ ಗ್ರಾಮಗಳಿಂದ ನೂರಾರು ರೈತರು ಭಾಗವಹಿಸಿದ್ದರು.

Tags:

error: Content is protected !!