ಜಿಲ್ಲೆಯ ಖಾನಾಪುರ ತಹಶೀಲ್ದಾರರು ಅಭಿವೃದ್ಧಿ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿರುದ್ಧ ಜಿಲ್ಲೆಯ ಸರ್ಕಾರಿ ನೌಕರರು ಹಾಗೂ ಪಿಡಿಒಗಳ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣದ ಕ್ರಮಕ್ಕೆ ಒತ್ತಾಯಿಸಿವೆ.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಯೋಜಿಸಲಾಗಿದ್ದ ಎಸ್.ಐ.ಆರ್ ತರಬೇತಿ ಕಾರ್ಯಕ್ರಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿದ್ದ ಪಿಡಿಒ ಅಧಿಕಾರಿಗಳು ತಮ್ಮ ಕೆಲಸಕ್ಕೆ ಸಂಬಂಧಿಸಿದ ಸಂಶಯಗಳನ್ನು ಕೇಳಲು ಹೋದಾಗ, ತಹಶೀಲ್ದಾರರು ಏಕವಚನ ಬಳಸಿ, ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಭೆಯಿಂದ ಹೊರಗೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಸಭಾಂಗಣದಿಂದ ಹೊರಗೆ ಬಂದು ಪಿಡಿಒ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರತಿಭಟನೆಯನ್ನು ನಡೆಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಹಶೀಲ್ದಾರ್ ಅವರ ಈ ಸರ್ವಾಧಿಕಾರಿ ಧೋರಣೆ ಹಾಗೂ ದುರ್ವರ್ತನೆಯನ್ನು ವಿರೋಧಿಸಿ ಬೆಳಗಾವಿ ಜಿಲ್ಲೆಯ ಎಲ್ಲಾ ಪಿಡಿಒಗಳು ಒಗ್ಗಟ್ಟಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಬರುವ ಸೋಮವಾರದೊಳಗೆ ಸದರಿ ತಹಶೀಲ್ದಾರ್ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಅಥವಾ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಕಟ್ಟುನಿಟ್ಟಿನ ಒತ್ತಾಯ ಹೇರಿದ್ದಾರೆ. ಒಂದು ವೇಳೆ ನಿಗದಿತ ಸಮಯದೊಳಗೆ ಜಿಲ್ಲಾಡಳಿತ ಯಾವುದೇ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಮಂಗಳವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಬಾಲರಾಜ್ ಭಜಂತ್ರಿ ಎಚ್ಚರಿಕೆ ನೀಡಿದ್ದಾರೆ.
ಇದೇ ವಿಷಯವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಸಂಘದ ಜಿಲ್ಲಾಧ್ಯಕ್ಷರಾದ ಉಸ್ಮಾನ್ ಅದಾಫ್ ಅವರು ಕೂಡ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರ ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿರುವ ಅವರು, ಸೋಮವಾರದೊಳಗೆ ತಹಶೀಲ್ದಾರ್ ಅವರನ್ನು ಖಾನಾಪುರ ತಾಲೂಕಿನಿಂದ ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮಂಗಳವಾರದಿಂದ ಜಿಲ್ಲಾದ್ಯಂತ ಎಲ್ಲಾ ಪಿಡಿಒ ಸದಸ್ಯರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಪ್ರಮುಖ ಸದಸ್ಯರು ಹಾಗೂ ನೌಕರರು ಉಪಸ್ಥಿತರಿದ್ದರು.
