ಖಾನಾಪೂರ ತಾಲೂಕಿನ ನಂದಗಡದ ಬಸಪ್ಪಣ್ಣ ಅರಗಾವಿ ಇಂಗ್ಲಿಷ್ ಮೇಡಿಯಮ್ ಶಾಲೆಗೆ ಪ್ರತಿಷ್ಠಿತ “ಗೋಲ್ಡನ್ ಸ್ಕೂಲ್” ಹಾಗೂ ಶಾಲೆಯ ಪ್ರಾಂಶುಪಾಲೆ ನೇಹಾ ದಲಾಲ ಅವರಿಗೆ “ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡ್” ಲಭಿಸಿದೆ. ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ತೋರಿದ ನೂರಕ್ಕೆ ನೂರರಷ್ಟು ಅತ್ಯುತ್ತಮ ಸಾಧನೆಯ ಹಿನ್ನೆಲೆಯಲ್ಲಿ ಈ ಗೌರವ ಒಲಿದುಬಂದಿದ್ದು, ಶಾಲಾ ಆವರಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.

ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನಂದಗಡದ ಬಸಪ್ಪಣ್ಣ ಅರಗಾವಿ ಇಂಗ್ಲಿಷ್ ಮೇಡಿಯಮ್ ಶಾಲೆಯ ಸಾಧನೆಗೆ ಈಗ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಂಸ್ಥೆಯ ಈ ಹೆಮ್ಮೆಯ ಸಾಧನೆಯನ್ನು ಕೊಂಡಾಡಲಾಯಿತು. ಈ ಸಂದರ್ಭದಲ್ಲಿ ನಂದಗಡ ಗ್ರಾಮದ ಹಿರಿಯರು ಹಾಗೂ ಎನ್.ಆರ್.ಇ. ಸಂಸ್ಥೆಯ ಅಧ್ಯಕ್ಷರಾದ ಸಿ.ಜಿ. ವಾಲಿ, ಗ್ರಾಮ ದೇವತಾ ಜಾತ್ರಾ ಮಹೋತ್ಸವದ ಮಾಜಿ ಅಧ್ಯಕ್ಷ ಪಿ.ಕೆ. ಪಾಟೀಲ, ಗ್ರಾಮ ಪಂಚಾಯಿತಿ ಪಿಡಿಒ ಸಾಗರ ಕುಮಾರ್ ಬಿರಾದಾರ, ಚನ್ನವೀರೇಶ್ವರ ಕೋ-ಆಪ್ ಸೊಸೈಟಿಯ ಅಧ್ಯಕ್ಷ ಮಹಾಂತೇಶ ವಾಲಿ, ಮಹಾಂತೇಶ ರಾಹುತ, ಎಂ. ಶಫೀ ಖಾಜಿ, ಎ.ಎಂ. ಕೋಟಿ ಹಾಗೂ ಪತ್ರಕರ್ತ ಅಪ್ಪಾಜಿ ಪಾಟೀಲ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ವಿಜೇತರನ್ನು ಅಭಿನಂದಿಸಿದರು.
*- ಅಲ್ತಾಫ್ ಎಂ. ಬಸರೀಕಟ್ಟಿ, ಇನ್ ನ್ಯೂಸ್ ಖಾನಾಪೂರ*
