ಬೆಳಗಾವಿಯ ಕ್ಯಾಂಪ್ ಪ್ರದೇಶದ ಮಹಿಳಾ ಪೊಲೀಸ್ ಠಾಣೆಯ ಎದುರಿನ ಫುಟ್ಪಾತ್ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ಇಬ್ಬರು ವೃದ್ಧೆಯರ ಬಾಳಿಗೆ ಕೊನೆಗೂ ಆಸರೆ ಸಿಕ್ಕಿದೆ. ಜನಪ್ರತಿನಿಧಿಗಳು ಹಾಗೂ ಮಾಜಿ ಶಾಸಕರ ಕುಟುಂಬದ ಜಂಟಿ ಶ್ರಮದಿಂದ ವೃದ್ಧೆಯರ ಪುನರ್ವಸತಿ ಕಾರ್ಯ ಯಶಸ್ವಿಯಾಗಿದೆ.”

ಬೆಳಗಾವಿಯ ಕ್ಯಾಂಪ್ ಭಾಗದ ಮಹಿಳಾ ಪೊಲೀಸ್ ಠಾಣೆಯ ಎದುರಿನ ರಸ್ತೆ ಬದಿಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಆಸರೆಯಿಲ್ಲದೇ ವಾಸಿಸುತ್ತಿದ್ದ ಇಬ್ಬರು ವಯೋವೃದ್ಧ ಮಹಿಳೆಯರ ನಿರಾಸ್ರಿತ ಬದುಕಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಮಳೆಗಾಲದಲ್ಲಿ ಕೇವಲ ತಾರ್ಪಲ್ ಆಸರೆಯಲ್ಲಿ ದಿನ ಕಳೆಯುತ್ತಿದ್ದ ಈ ವೃದ್ಧೆಯರ ಸ್ಥಿತಿ ಕಂಡು ಮಾಜಿ ಶಾಸಕ ಅಡ್ವೊಕೇಟ್ ಅನಿಲ್ ಬೆನಕೆ ಅವರು ಭೇಟಿ ನೀಡಿ ನೆರವಿನ ಭರವಸೆ ನೀಡಿದ್ದರು. ಅದರಂತೆ, ಅವರು ಮಾಜಿ ಮಹಾಪೌರ ವಿಜಯ್ ಮೋರೆ ಅವರೊಂದಿಗೆ ಚರ್ಚಿಸಿ, ದಿವಂಗತ ಮಾಜಿ ಶಾಸಕ ಸಂಭಾಜಿ ಪಾಟೀಲ್ ಅವರ ಪತ್ನಿಯವರನ್ನು ಸಂಪರ್ಕಿಸಿದರು. ವೃದ್ಧೆಯರ ಕಷ್ಟಕ್ಕೆ ತಕ್ಷಣವೇ ಸ್ಪಂದಿಸಿದ ಸಂಭಾಜಿರಾವ್ ಪಾಟೀಲ್ ಅವರ ಪತ್ನಿ, ಕ್ಯಾಂಪ್ ಪ್ರದೇಶದಲ್ಲಿರುವ ತಮ್ಮ ಒಡೆತನದ ಎರಡು ಕೊಠಡಿಗಳನ್ನು ಉಚಿತವಾಗಿ ವಾಸಿಸಲು ನೀಡುವ ಮೂಲಕ ದೊಡ್ಡ ಗುಣ ಮೆರೆದಿದ್ದಾರೆ.
ಈ ಹಿಂದೆ ವೃದ್ಧೆಯರಿಗೆ ವೃದ್ಧಾಶ್ರಮದ ಆಯ್ಕೆ ನೀಡಲಾಗಿತ್ತು, ಆದರೆ ಅವರು ನಿರಾಕರಿಸಿದ್ದರು. ಮುಂಬೈನಲ್ಲಿರುವ ಇವರ ಸಹೋದರನ ಬಳಿ ಕಳುಹಿಸಿದರೂ ಅಲ್ಲಿಯೂ ಇವರ ಸಾಕು-ಸಲಹುವಿಕೆ ಸರಿಯಾಗಿ ಆಗಿರಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಇವರ ಸ್ಥಿತಿ ತಿಳಿದ ಮಾಜಿ ಶಾಸಕ ಅನಿಲ್ ಬೆನಕೆ ಹಾಗೂ ವಿಜಯ್ ಮೋರೆ ಅವರ ನಿರಂತರ ಪ್ರಯತ್ನದಿಂದಾಗಿ ಕೊನೆಗೂ ಇವರಿಗೊಂದು ಶಾಶ್ವತ ನಿವಾರ ಸಿಕ್ಕಂತಾಗಿದೆ. ಮಾಜಿ ಶಾಸಕರ ಕುಟುಂಬದ ಈ ಶ್ಲಾಘನೀಯ ಕಾರ್ಯಕ್ಕೆ ಅಕ್ಕಾ ಪಡೆಯ ಪ್ರತಿನಿಧಿಗಳು, ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದ ಸಮರ್ಪಿಸಿದ್ದಾರೆ.
