“ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಕ್ರಾಸ್ ಬಳಿ ಇಂದು ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ್ದು, ಅಪಘಾತದ ತೀವ್ರತೆಗೆ ಇಡೀ ಪ್ರದೇಶವೇ ಕಂಗೆಟ್ಟಿದೆ.”

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಕ್ರಾಸ್ ಬಳಿ ಈ ಘೋರ ದುರಂತ ಸಂಭವಿಸಿದೆ. ಮೃತರನ್ನು ತೋಳಮಟ್ಟಿ ಗ್ರಾಮದ ನಿವಾಸಿಗಳಾದ ಮಂಜುನಾಥ್ ಮೇಟಿ (26) ಮತ್ತು ಶ್ರೀಶೈಲ ಬಾವಿ (24) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಪರಸ್ಪರ ಮಾವ ಮತ್ತು ಅಳಿಯನಾಗಿದ್ದು, ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಇವರಿಗೆ ಡಿಕ್ಕಿ ಹೊಡೆದಿದೆ. ಲಾರಿ ಹರಿದ ರಭಸಕ್ಕೆ ಬೈಕ್ ಸವಾರನ ದೇಹ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರುಂಡ ದೇಹದಿಂದ ಬೇರ್ಪಟ್ಟು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಇನ್ನು ಲಾರಿ ಡಿಕ್ಕಿ ಹೊಡೆದ ತೀವ್ರತೆಗೆ ಬೈಕ್ನಲ್ಲಿದ್ದ ಮತ್ತೊಬ್ಬ ಯುವಕನ ದೇಹ ರಸ್ತೆಯ ಪಕ್ಕದ ಮುಳ್ಳು ಕಂಟಿಗೆ ಹೋಗಿ ಬಿದ್ದಿದೆ. ಅಪಘಾತದ ದೃಶ್ಯ ಅತ್ಯಂತ ಕರುಣಾಜನಕವಾಗಿದ್ದು, ಸ್ಥಳೀಯರು ವಾಹನ ನಿಲ್ಲಿಸಿ ಮೃತರ ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೀಳಗಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
