ಕರಳು ಸೀಳುವ ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿದ್ದ ಬಾಗಲಕೋಟೆ ಜಿಲ್ಲೆಯ ಜನತೆಗೆ ವರುಣ ದೇವ ತಂಪಾದ ಮುದ ನೀಡಿದ್ದಾನೆ. ಜಿಲ್ಲೆಯ ಪ್ರಮುಖ ಭಾಗಗಳಲ್ಲಿ ಹಠಾತ್ತನೆ ಬಿರುಗಾಳಿ ಸಹಿತ ತುಂತುರು ಮಳೆ ಸುರಿದಿದ್ದು, ಇಡೀ ಕೋಟೆ ನಗರಿ ಮಲೆನಾಡಿನಂತೆ ಕಂಗೊಳಿಸುತ್ತಿದೆ.


ಬಾಗಲಕೋಟೆ ಜಿಲ್ಲೆಯಾದ್ಯಂತ ಇಂದು ಪ್ರಕೃತಿಯ ಅಪರೂಪದ ವಿಸ್ಮಯವೊಂದು ಸಾಕ್ಷಿಯಾಗಿದೆ. ಇಂದು ಬೆಳಗ್ಗಿನಿಂದಲೇ ಸಂಪೂರ್ಣವಾಗಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನದ ವೇಳೆಗೆ ಬಾಗಲಕೋಟೆ ನಗರ, ನವನಗರ, ವಿದ್ಯಾಗಿರಿ ಹಾಗೂ ವೀರಾಪೂರ ಆರ್‌ಸಿ ಕಾಲನಿ ಸೇರಿದಂತೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಜಿಟಿ ಜಿಟಿ ಮಳೆ ಆರಂಭವಾಗಿದೆ.

ಕಳೆದ ಕೆಲವು ದಿನಗಳಿಂದ ಸೂರ್ಯನ ಪ್ರಖರ ಬಿಸಿಲಿನ ತಾಪ ಹಾಗೂ ಉಷ್ಣಾಂಶಕ್ಕೆ ತತ್ತರಿಸಿ ಹೋಗಿದ್ದ ಸಾರ್ವಜನಿಕರು ಮತ್ತು ರೈತರಿಗೆ ಈ ವರುಣನ ಸಿಂಚನ ಭಾರಿ ನಿರಾಳತೆ ತಂದಿದೆ. ಬಿಸಿಲ ನಗರಿ ಎಂದೇ ಗುರುತಿಸಲ್ಪಡುವ ಬಾಗಲಕೋಟೆಯಲ್ಲಿ ದಿಢೀರನೆ ತಂಪಾದ ಗಾಳಿ ಹಾಗೂ ರಮಣೀಯ ವಾತಾವರಣ ಸೃಷ್ಟಿಯಾಗಿದ್ದು, ಕ್ಷಣಾರ್ಧದಲ್ಲಿ ಇಡೀ ನಗರ ಮಲೆನಾಡಿನ ಸುಂದರ ಪರಿಸರವನ್ನು ನೆನಪಿಸುವಂತೆ ಬದಲಾಗಿದೆ. ಈ ಆಹ್ಲಾದಕರ ಹವಾಮಾನವನ್ನು ಕಂಡು ಸ್ಥಳೀಯ ನಾಗರಿಕರು ಸಡಗರ ಪಡುತ್ತಿದ್ದಾರೆ.
