Bagalkote

ಜಮಖಂಡಿ ಪೊಲೀಸರ ಚಾಣಾಕ್ಷತನ: ಕಳೆದುಹೋಗಿದ್ದ 27 ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರ!

Share

ಕಳೆದುಹೋದ ಮೊಬೈಲ್ ಮತ್ತೆ ಸಿಗಲ್ಲ ಅನ್ನೋ ಕಾಲ ಈಗ ಬದಲಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸರು ಮೊಬೈಲ್ ಕಳೆದುಕೊಂಡು ಕಂಗಾಲಾಗಿದ್ದ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. ಕಳೆದುಹೋಗಿದ್ದ ಬರೋಬ್ಬರಿ 27 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾಪಸ್ ನೀಡಿದ ಆ ವರದಿ ಇಲ್ಲಿದೆ ನೋಡಿ…”
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮೊಬೈಲ್ ಕಳ್ಳತನ ಮತ್ತು ಮೊಬೈಲ್ ಕಾಣೆಯಾದ ಕುರಿತು ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ ದೂರುಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಈ

 

ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಸಿಪಿಐ ಮಲ್ಲಪ್ಪ ಮಡ್ಡಿ ಅವರ ನೇತೃತ್ವದಲ್ಲಿ, ಪಿಎಸ್‌ಐ ಅನಿಲ್ ಕುಂಬಾರ ಹಾಗೂ ಎಎಸ್‌ಐ ಭೀಮಸಿ ಮದರಕಂಡಿ ಅವರನ್ನೊಳಗೊಂಡ ತಂಡವು ತಾಂತ್ರಿಕ ಮಾಹಿತಿಗಳನ್ನು ಆಧರಿಸಿ ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿ, ವಿವಿಧ ಕಂಪನಿಯ ಸುಮಾರು 27 ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಇನ್ನು ಪತ್ತೆಯಾದ ಮೊಬೈಲ್‌ಗಳ ಮಾಲೀಕರನ್ನು ಗುರತಿಸಿ ಠಾಣೆಗೆ ಕರೆಸಿಕೊಂಡ ಪೊಲೀಸರು, ಅವರ ಸಮ್ಮುಖದಲ್ಲೇ ಮೊಬೈಲ್‌ಗಳನ್ನು ಹಸ್ತಾಂತರಿಸಿದರು. ಆಸೆಯನ್ನೇ ಬಿಟ್ಟಿದ್ದ ಫೋನ್ ಮರಳಿ ಸಿಕ್ಕ ಖುಷಿಯಲ್ಲಿ ಮಾಲೀಕರು ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು. ಪೊಲೀಸರ ಈ ಜನಸ್ನೇಹಿ ಕಾರ್ಯ ಮತ್ತು ಕ್ಷಿಪ್ರ ಕಾರ್ಯಾಚರಣೆಗೆ ಜಮಖಂಡಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳ್ಳತನ ತಡೆಗೆ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

Tags:

error: Content is protected !!