ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪಕಾರಾಗೃಹದಲ್ಲಿ ಕೈದಿಗಳು ರೌಡಿಸಂ ಪ್ರದರ್ಶಿಸಿದ್ದಾರೆ. ವಿಚಾರಣಾಧೀನ ಕೈದಿಗಳ ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಪಡಿತರ ಅಕ್ಕಿ ಮಾಫಿಯಾ ಗ್ಯಾಂಗ್ ಭೀಕರವಾಗಿ ಹಲ್ಲೆ ನಡೆಸಿದ್ದು, ಜೈಲರ್ ಅವರ ಕೈ ಮುರಿದಿರುವ ಘಟನೆ ಸಂಭವಿಸಿದೆ.

ಜಮಖಂಡಿ ಹೊರವಲಯದ ಕಾರಾಗೃಹದಲ್ಲಿ ನಿನ್ನೆ ಸಂಜೆ ವಿಚಾರಣಾಧೀನ ಕೈದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಕೈದಿಗಳನ್ನು ಸಮಾಧಾನಪಡಿಸಲು ಹೋದ ಜೈಲರ್ ವಿ.ಡಿ. ಕುಂಬಾರ ಅವರ ಮೇಲೆ ಕೈದಿಗಳ ಗ್ಯಾಂಗ್ ಏಕಾಏಕಿ ಎರಗಿದೆ. ಕೈದಿಗಳು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಜೈಲರ್ ಅವರ ಎಡಗೈ ಫ್ರ್ಯಾಕ್ಚರ್ ಆಗಿದ್ದು, ಮೈತುಂಬಾ ಗಾಯಗಳಾಗಿವೆ. ತಕ್ಷಣವೇ ಅವರನ್ನು ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಜಾಕೀರ್ ಹುಸೇನ್ ಮಕಾಂದಾರ್, ಫಯಾಜ್ ಮಕಾಂದಾರ್, ಅಶೋಕ ನಾಯ್ಕೋಡಿ ಹಾಗೂ ಅರ್ಪಾತ್ ತಾಳಿಕೋಟಿ ಎಂಬುವವರೇ ಈ ಕೃತ್ಯ ಎಸಗಿದ ಕಿರಾತಕರು. ಜೈಲಿನ ಒಳಗೂ ತಮ್ಮ ದರ್ಪ ತೋರಿದ ಈ ಗ್ಯಾಂಗ್ ವಿರುದ್ಧ ಈಗ ಮತ್ತೊಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

